ADVERTISEMENT

ಧರ್ಮ ಪಾಲನೆಯಿಂದ ಸಂತೃಪ್ತಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:34 IST
Last Updated 22 ಏಪ್ರಿಲ್ 2017, 4:34 IST
ಕಲಬುರ್ಗಿ: ‘ಮನುಷ್ಯ ಗಳಿಸುವುದನ್ನು ಕಲಿತಂತೆ ಬದುಕುವುದನ್ನೂ ಕಲಿಯಬೇಕಾಗುತ್ತದೆ. ಕನಸು ನೂರಾರು ಇದ್ದರೂ ಮನಸ್ಸು ಒಂದೇ ಇರಬೇಕಾಗುತ್ತದೆ. ಸುಖ ಶಾಂತಿಯ ಬದುಕಿಗೆ ಧರ್ಮ ಪಾಲನೆಯ ಅವಶ್ಯಕತೆಯಿದೆ’ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಹೇಳಿದರು.
 
ಇಲ್ಲಿನ ಕೋಟನೂರು ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
 
‘ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆಗೆ ಹೋರಾಡಬೇಕಾಗುತ್ತದೆ. ಒಳ್ಳೆಯ ಗುಣ ಮನುಷ್ಯನ ಆಸ್ತಿ. ಒಳ್ಳೆಯ ಸಂಬಂಧ ಜೀವನದ ಆಸ್ತಿ. ಶಾಶ್ವತವಲ್ಲದ ಜೀವನ, ಅಸ್ಥಿರವಾದ ಸಂಪತ್ತು, ಮಾಸಿ ಹೋಗುವ ಸೌಂದರ್ಯ ನಂಬಿ ಕೆಡಬೇಡ’ ಎಂದರು.
 
‘ಸತ್ಯ, ಧರ್ಮ, ಶಾಂತಿ ಮಾರ್ಗದಲ್ಲಿ ನಡೆದು ಸಾರ್ಥಕ ಬದುಕನ್ನು ಕಟ್ಟಿಕೊಳ್ಳುವುದು ಹೆಚ್ಚು ಶ್ರೇಯಸ್ಕರ. ಪ್ರಾಣ, ಯೌವನ, ಕಾಲ ಕಳೆದು ಹೋದರೆ ಮತ್ತೆಂದೂ ತಿರುಗಿ ಬರುವುದಿಲ್ಲ.  ವಿದ್ಯೆ, ಸ್ನೇಹ ಮತ್ತು ಸಂಬಂಧಗಳನ್ನು ಹೊಂದಿ ಬದುಕಿನಲ್ಲಿ ಸುಖ ಶಾಂತಿ ಕಾಣಬೇಕು’ ಎಂದು ಕಿವಿಮಾತು ಹೇಳಿದರು.
 
ಸ್ಟೇಷನ್ ಬಬಲಾದ ಬೃಹನ್ಮಠದ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ‘ಉತ್ತಮ ಬದುಕಿಗೆ ಧರ್ಮ ದಿಕ್ಸೂಚಿಯಾಗಿದೆ. ವೀರಶೈವ ಧರ್ಮ ಸಂಸ್ಕಾರ ಸದ್ವಿಚಾರ ಬೆಳೆಸುವ ಬಹು ದೊಡ್ಡ ಕಾರ್ಯ ಮಾಡಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತುಂಬಿವೆ’ ಎಂದರು. 
 
ಶಿವಶರಣಪ್ಪ ಸೀರಿ, ರಾಜೇಂದ್ರ ಪಾಟೀಲ, ಬಸವರಾಜ ದಿಗ್ಗಾಂವಿ, ನಾಗರಾಜ ವಾರದ, ಬಸವರಾಜ ಕೋಸಿಕ, ಸೋಮಶೇಖರ ಟೆಂಗಳಿ, ಚಂದ್ರಕಾಂತ ಪಾಟೀಲ, ವಿಜಯಲಕ್ಷ್ಮಿ ಹಾಗರಗಿ, ಸತೀಶಕುಮಾರ ಪಾಟೀಲ, ಸೋಮಶೇಖರ ಮಾವೂರ, ಮಲ್ಲಿಕಾರ್ಜುನ ಮಾವೂರಕರ, ಸೂರ್ಯಕಾಂತ ಪೊಲೀಸ್‌ ಪಾಟೀಲ, ಮಲ್ಲಿಕಾರ್ಜುನ ಮಾಲಿಪಾಟೀಲ ಪಾಲ್ಗೊಂಡಿದ್ದರು. 
 
ಶಿವಶಂಕರ ಬಿರಾದಾರ ಗುಡ್ಡಾಪುರದ ವರದಾನೇಶ್ವರಿ ಪುರಾಣ ನಡೆಸಿಕೊಟ್ಟರು. ಶಿವರುದ್ರಯ್ಯ ಗೌಡಗಾಂವ ಸಂಗೀತ ಸೇವೆ ಸಲ್ಲಿಸಿದರು. ಶಿವರಾಜ ಮೇಳಕುಂದ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳನ್ನು ರಾಮಮಂದಿರದಿಂದ ಕೋಟನೂರವರೆಗೆ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.