ADVERTISEMENT

ನಗರಕ್ಕೂ ಬಂದ ವಿದ್ಯುತ್‌ ಚಿತಾಗಾರ

ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಸಾರ್ವಜನಿಕ ಚಿತಾಗಾರ ಕಾರ್ಯಾರಂಭ

ವಿಶ್ವರಾಧ್ಯ
Published 25 ಮೇ 2017, 6:30 IST
Last Updated 25 ಮೇ 2017, 6:30 IST
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ವಿದ್ಯುತ್‌ ಚಿತಾಗಾರದ ಕಾರ್ಯಾಚರಣೆ ವಿವರಿಸುತ್ತಿರುವ ಆಪರೇಟರ್‌ ನಾಗರಾಜ ಜಮಾದಾರ.
ಕಲಬುರ್ಗಿಯ ನ್ಯೂ ರಾಘವೇಂದ್ರ ಕಾಲೊನಿಯಲ್ಲಿರುವ ವಿದ್ಯುತ್‌ ಚಿತಾಗಾರದ ಕಾರ್ಯಾಚರಣೆ ವಿವರಿಸುತ್ತಿರುವ ಆಪರೇಟರ್‌ ನಾಗರಾಜ ಜಮಾದಾರ.   

ಕಲಬುರ್ಗಿ: ನಗರದ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಸಾರ್ವಜನಿಕ ‘ವಿದ್ಯುತ್‌ ಚಿತಾಗಾರ’ ನಿರ್ವಹಿಸುತ್ತಿದೆ. ಶವ ಸುಡುವ ಸಂಪ್ರದಾಯ ಹೊಂದಿರುವ ಸಮುದಾಯದ ಜನ ಚಿತಾಗಾರದಲ್ಲಿ ಮೃತದೇಹ ಸುಡುತ್ತಿದ್ದಾರೆ.

ಈ ಚಿತಾಗಾರವು 2016ರ ನವೆಂಬರ್‌ 10 ರಿಂದ ಕಾರ್ಯಾರಂಭ ಮಾಡಿದೆ. ಪ್ರತಿ ತಿಂಗಳು ಸರಾಸರಿ 8–9 ಶವಗಳನ್ನು ಸುಡಲಾಗುತ್ತಿದೆ. ಒಬ್ಬರು ಆಪರೇಟರ್‌, ಇಬ್ಬರು ಕಾವಲುಗಾರರು, ಒಬ್ಬ ಮಹಿಳಾ ಸಿಬ್ಬಂದಿ ಇದ್ದಾರೆ.

ಶವ ಸುಡಲು ಮಹಾನಗರ ಪಾಲಿಕೆಯಲ್ಲಿ ಹಣ ನೀಡಿ ರಸೀದಿ ಪಡೆಯಬೇಕು. ಪಾಲಿಕೆಯ ‘ವೈಕುಂಠ ವಾಹನ’ ಬಾಡಿಗೆಗೆ ಬೇಕಾದರೆ ಅದಕ್ಕೆ ಪ್ರತ್ಯೇಕ ₹1 ಸಾವಿರ ನೀಡಬೇಕು.

ಶವವನ್ನು ಕಟ್ಟಿಗೆಯಿಂದ ಸುಟ್ಟರೆ ₹10 ಸಾವಿರದ ವರೆಗೂ ಖರ್ಚು ಬರುತ್ತದೆ. ಸುಡುವಾಗ ಹೊಗೆ ಹರಡಿ ವಾತಾವರಣ ಕಲುಷಿತಗೊಳ್ಳುತ್ತದೆ. ಅಲ್ಲದೆ, ಮೂಳೆಗಳು ಹಾಗೆಯೇ ಉಳಿಯುತ್ತವೆ. ನಾಯಿ, ಹಂದಿ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಮೂಳೆಗಳನ್ನು ಕಚ್ಚಿಕೊಂಡು ಹೋಗಿ ಎಲ್ಲೆಂದರಲ್ಲಿ ಬಿಸಾಡುತ್ತವೆ. ಇಲ್ಲಿ ಶವವನ್ನು ಸುಡುವುದರಿಂದ ಇವುಗಳನ್ನು ತಪ್ಪಿಸಬಹುದು.

ಚಿತಾಗಾರದ ಕಾರ್ಯ ಹೀಗೆ: ವಿದ್ಯುತ್‌ ಚಿತಾಗಾರಕ್ಕೆ ಶವವನ್ನು ತಂದಾಗ ಶುಲ್ಕ ಕಟ್ಟಿ ಪಾಲಿಕೆಯಿಂದ ಪಡೆದ ರಸೀದಿ ಪರಿಶೀಲಿಸಿ ಹೆಸರು ನೋಂದಾಯಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಿಂದ ತಂದ ಶವಕ್ಕೆ ಶುಲ್ಕ ನೀಡುವ ಅವಶ್ಯ ಇಲ್ಲ. ಆದರೆ, ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಸಾಕ್ಷಿಗಾಗಿ ಮೃತರ ಇಬ್ಬರು ಸಂಬಂಧಿಕರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಪಡೆಯಲಾಗುತ್ತದೆ.

‘ಶವ ತಂದಾಗ ಸಂಬಂಧಿಕರು 10 ನಿಮಿಷ ಪೂಜೆ ಸಲ್ಲಿಸುತ್ತಾರೆ. ನಂತರ 5 ನಿಮಿಷ ಮುಖ ದರ್ಶನಕ್ಕೆ ಅಂತಿಮ ಅವಕಾಶ ಕಲ್ಪಿಸಲಾಗುವುದು’ ಎಂದು ಚಿತಾಗಾರದ ಆಪರೇಟರ್‌ ನಾಗರಾಜ ಜಮಾದಾರ ತಿಳಿಸಿದರು.

‘ಶವವನ್ನು ಸುಟ್ಟ ನಂತರ 2 ರಿಂದ 3 ಕೆ.ಜಿ. ಬೂದಿ ಬರುತ್ತದೆ. ಅದನ್ನು ತೆಗೆದು ಮೃತ ವ್ಯಕ್ತಿಯ ಹೆಸರು ಬರೆದು ಜೋಪಾನ ಮಾಡುತ್ತೇವೆ. ಮೂರು ದಿನಗಳ ನಂತರ ಸಂಬಂಧಿಕರು ಬಂದು ಬೂದಿಯನ್ನು ತೆಗೆದುಕೊಂಡು ಹೋಗುತ್ತಾರೆ. ಚಿತಾಗಾರಕ್ಕೆ ಹೊಗೆ ಹೋಗಲು ಎತ್ತರದ ಕೊಳವೆ ಇರುವುದರಿಂದ ಸುತ್ತಲಿನ ಜನರಿಗೆ ಯಾವುದೇ ದುರ್ವಾಸನೆ ಬರುವುದಿಲ್ಲ’ ಎಂದು ಹೇಳುತ್ತಾರೆ.

‘ಚಿತಾಗಾರದಲ್ಲಿ ವಿದ್ಯುತ್‌ ಸಮಸ್ಯೆ ಇತ್ತು. ಅದಕ್ಕಾಗಿ ಜನರೇಟರ್‌ ತಂದಿರಿಸಲಾಗಿದೆ.  ವಾರದಲ್ಲಿ ಸಂಪರ್ಕ ಕಲ್ಪಿಸಲಾಗುವುದು’ ಎಂದು ಪಾಲಿಕೆಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಅಬ್ದುಲ್‌ ರೆಹಮಾನ್‌ ತಿಳಿಸಿದರು.

‘ಚಿತಾಗಾರ ಆವರಣದಲ್ಲಿ ಕೊಳವೆಬಾವಿ ಇದೆ. ಕಾರಣ ಶವ ಸುಡಲು ಬರುವ ಸಂಬಂಧಿಕರಿಗೆ ಮತ್ತು ಚಿತಾಗಾರದಲ್ಲಿ ನೀರಿನ ಸಮಸ್ಯೆ ಇಲ್ಲ. ಆವರಣ ಗೋಡೆಗೆ ಗೇಟ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಪಿ.ಜಾಧವ್‌ ಹೇಳಿದರು.

*
ಯಾವ ಸಮುದಾಯಗಳಲ್ಲಿ ಶವ ಸುಡುವ ಸಂಪ್ರದಾಯ ಇದೆಯೋ ಅವರು ವಿದ್ಯುತ್‌ ಚಿತಾಗಾರದ ಉಪಯೋಗ ಪಡೆದುಕೊಳ್ಳಬೇಕು.
-ಪಿ.ಸುನಿಲ್‌ಕುಮಾರ್‌,
ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT