ADVERTISEMENT

ನಾಲ್ಕನೇ ಬಾರಿ ಅಖಾಡಕ್ಕೆ ಇಳಿದ ಎದುರಾಳಿಗಳು

ಕುತೂಹಲ ಕೆರಳಿಸಿದ ವಿಧಾನಸಭಾ ಕ್ಷೇತ್ರ; ಮತ ಸೆಳೆಯಲು ರಾಜಕಾರಣಿಗಳ ವಿವಿಧ ಕಸರತ್ತು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:25 IST
Last Updated 26 ಏಪ್ರಿಲ್ 2018, 11:25 IST

ಸೇಡಂ: ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೇಡಂ ವಿಧಾನಸಭಾ ಕ್ಷೇತ್ರ ಅತ್ಯಂತ ಕುತೂಹಲಕ್ಕೆರಳಿಸಿದ್ದು, ಸತತ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಮತ್ತು ಪರಾಭವಗೊಂಡ ಅಭ್ಯರ್ಥಿಗಳೇ ನಾಲ್ಕನೆ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಸತತ ಮೂರು ಬಾರಿ ಗೆಲುವು ಸಾಧಿಸಿರುವ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕೆ ಇಳಿಸಿದರೆ, ಇತ್ತ ಸತತ ಮೂರು ಬಾರಿ ಪಾಟೀಲರ ವಿರುದ್ಧ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ಅವರನ್ನೇ ಬಿಜೆಪಿ ಪುನಃ ಅಖಾಡಕ್ಕೆ ತಳ್ಳಿದೆ.

ಜೆಡಿಎಸ್‌ನಿಂದ ಮಳಖೇಡನ ಸುನಿತಾ ಭೀಮಶಾ ತಳವಾರ ನಾಮಪತ್ರ ಸಲ್ಲಿಸಿದ್ದು, ಎಂಇಪಿಯಿಂದ ಚಿಂಚೋಳಿ ತಾಲ್ಲೂಕು ಹುಲಸಗುಡ ಗ್ರಾಮದ ರೇಖಾ ದಯಾನಂದ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ಸೇಡಂ ಇತಿಹಾಸದಲ್ಲೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮತ್ತು ಎಂಇಪಿನಿಂದ ಮಹಿಳೆಯರು ಚುನಾವಣೆ ಕಣಕ್ಕೆ ಇಳಿದಿರುವುದು ಗಮನಾರ್ಹ ಸಂಗತಿ. ಗೆಲುವಿನ ಕುದುರೆಯ ಬೆನ್ನಹತ್ತಿರುವ ಶರಣಪ್ರಕಾಶ ಪಾಟೀಲ ಅವರನ್ನು ಸೋಲಿಸುವ ನಿರ್ಧಾರದಿಂದ ರಾಜಕುಮಾರ ಪಾಟೀಲ ಅವರು ಕ್ಷೇತ್ರದಲ್ಲಿ 40 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದು, ಪಾದಯಾತ್ರೆ ಮುಂದುವರಿದಿದೆ.

‘ಸಚಿವರ ಆಡಳಿತದ ವಿಫಲತೆ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನರಿಗೆ ತಿಳಿಸಿ ಇದೊಂದು ಬಾರಿ ನಮಗೆ ಗೆಲ್ಲಿಸಿ’ ಎಂದು ಮತಯಾಚಿಸುತ್ತಿದ್ದಾರೆ.

ಅಲ್ಲದೆ, ಶರಣಪ್ರಕಾಶ ಅವರು ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದು, ಬಿರುಬಿಸಿಲಿನ ಮಧ್ಯೆ ನಿರಂತರ ಪ್ರಚಾರ ಕೈಗೊಂಡಿದ್ದಾರೆ. ‘ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನಮಗೆ ಮತನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡುತ್ತಿದ್ದಾರೆ. ಉಭಯಪಕ್ಷಗಳ ಚುನಾವಣಾ ಪ್ರಚಾರದ ಕಾವು ಹೆಚ್ಚಿದ್ದು, ಜೆಡಿಎಸ್‌ಮತ್ತು ಎಂಇಪಿ ಅಭ್ಯರ್ಥಿಗಳು ಪ್ರಚಾರದಲ್ಲಿದ್ದಾರೆ.

ಬೆಳಿಗ್ಗೆಯಿಂದ ಸಂಜೆವರೆಗೆ ಬಿರುಬಿಸಿಲಿನ ಕಾವು ಲೆಕ್ಕಿಸದೆ ಮತದಾರರನ್ನು ಸೆಳೆಯಲು ರಾಜಕಾರಣಿ ಗಳು ಕಸರತ್ತು ನಡೆಸುತ್ತಿದ್ದರೆ, ಚುನಾವಣಾಧಿಕಾರಿಗಳು ಸಹ ರಾಜಕಾರಣಿಗಳ ಹಣ, ಹೆಂಡ, ಸದ್ದಲ್ಲದೆ ನಡೆಯುವ ರಾತ್ರಿ ಪ್ರಚಾರ ಕಾರ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗೃತ ಕೆಲಸ ನಡೆಸಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅತ್ಯಂತ ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ. ಇಷ್ಟೆಲ್ಲಾ ಭದ್ರತೆಯ ಮಧ್ಯೆ ಚುನಾವಣೆಯ ಕೇಂದ್ರಬಿಂದುಗಳಾದ ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದೇ ಕಾದುನೋಡಬೇಕಾಗಿದೆ.

**
ಅನೇಕ ಅಭಿವೃದ್ಧಿ ಕೆಲಸ ಮಾಡಿರುವುದರಿಂದ ನಮಗೆ ಮತಕೇಳುವ ಹಕ್ಕು ಇದೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತದಾರರು ಗೆಲ್ಲಿಸಲಿದ್ದಾರೆ
– ಡಾ.ಶರಣಪ್ರಕಾಶ ಪಾಟೀಲ,ಕಾಂಗ್ರೆಸ್ ಅಭ್ಯರ್ಥಿ

**
ರಸ್ತೆಗಳ ಅಭಿವೃದ್ಧಿಯ ನೆಪ ದಲ್ಲಿ ಸರ್ಕಾರದ ಹಣವನ್ನು ಸಚಿವರು ಕಮಿಷನ್ ಪಡೆದಿದ್ದಾರೆ. ಆದರೆ, ರೈತರ ಕಣ್ಣೀರು ಸುರಿಸುವ ಕೆಲಸ ಸಚಿವರು ಮಾಡಿಲ್ಲ. ಬಿಜೆಪಿ ಗೆದ್ದರೆ ಆ ಕೆಲಸ ಮಾಡಲಾಗುತ್ತದೆ
– ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಅಭ್ಯರ್ಥಿ 
**

ಅವಿನಾಶ ಎಸ್.ಬೋರಂಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.