ADVERTISEMENT

ಪಕ್ಷದ ಸಾಧನೆ ಹೊತ್ತು ‘ಮನೆ ಮನೆಗೆ ಕುಮಾರಣ್ಣ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 7:00 IST
Last Updated 6 ನವೆಂಬರ್ 2017, 7:00 IST

ಕಲಬುರ್ಗಿ: ‘ಪ್ರಧಾನಿಯಾಗಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ ಸಾಧನೆಗಳು ಹಾಗೂ 2018ರ ಚುನಾವಣೆಯ ಪ್ರಣಾಳಿಕೆ ತಿಳಿಸಲು ಜೆಡಿಎಸ್‌ ವತಿಯಿಂದ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.

ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಭಾನುವಾರ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ‘ಮನೆ ಮನೆಗೆ ಕುಮಾರಣ್ಣ’ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಎಲ್ಲಾ ರೈತರ, ನೇಕಾರರ, ಕಾರ್ಮಿಕರ, ಮೀನುಗಾರರ, ಗ್ರಾಮೀಣ ಕುಶಲಕರ್ಮಿಗಳ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲಿದ್ದಾರೆ’ ಎಂದು ಭರವಸೆ ನೀಡಿದರು.

‘ಬೀದರ್‌ನಿಂದ ಚಾಮರಾಜ ನಗರದ ವರೆಗೆ ಜನರ ಮನೆ ಮನೆಯಲ್ಲಿ ಚರ್ಚೆ ಶುರುವಾಗಿದೆ. 10 ವರ್ಷ ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಿ ಎಂದರೆ ಪ್ರಿಂಟಿಂಗ್‌ ಮಷಿನ್‌ ಇದೆಯಾ? ಎಂದು ಕೇಳಿದ್ದರು. ಈಗಿನ ಸರ್ಕಾರ ಬಡವರ ಹೆಸರ ಮೇಲೆ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಮೂರೂವರೆ ಸಾವಿರಕ್ಕಿಂತ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ₹50 ಸಾವಿರದ ವರೆಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ ಹಲವು ಷರತ್ತುಗಳನ್ನು ಹಾಕಿದ್ದರಿಂದ ನಾಲ್ಕು ತಿಂಗಳು ಕಳೆದರೂ ರೈತರಿಗೆ ಸೌಲಭ್ಯ ಸಿಕ್ಕಿಲ್ಲ. ಆದರೆ, ಕುಮಾರಸ್ವಾಮಿ ಅವರು ಯಾವುದೇ ಷರತ್ತು ಇಲ್ಲದೆಯೇ ₹25 ಸಾಲ ಮನ್ನಾ ಮಾಡಿದ್ದರು’ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಜಾಫರ್‌ ಹುಸೇನ್‌ ಮಾತನಾಡಿ, ‘ಜೆಡಿಎಸ್‌ ಜಾತ್ಯತೀತ ಪಕ್ಷವಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಏಳಿಗೆಗೆ ಶ್ರಮಿಸಿದೆ. ಮತ್ತೆ ಜನಪರ ಯೋಜನೆಗಳು ಜಾರಿಗೆ ಬರಲು ಪಕ್ಷವನ್ನು ಬೆಂಬಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ‘ಜೆಡಿಎಸ್‌ ಪಕ್ಷದ ಜನಪರ ಯೋಜನೆಗಳನ್ನು ಜನ ಮರೆತಿಲ್ಲ. ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದ ಮೂಲಕ ದಕ್ಷಿಣ ಮತಕ್ಷೇತ್ರದಲ್ಲಿ ಪಕ್ಷದ ಸಾಧನೆ ಮತ್ತು ಕಾಂಗ್ರೆಸ್‌, ಬಿಜೆಪಿ ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಲಾಗುವುದು’ ಎಂದು
ಹೇಳಿದರು.

‘ಪಕ್ಷಕ್ಕೆ ಹಲವು ಜನ ಬರುತ್ತಾರೆ. ಗೆದ್ದು ಅಧಿಕಾರ ಅನುಭವಿಸಿದ ನಂತರ ಸೋತಾಗ ಪಕ್ಷ ತ್ಯಜಿಸುತ್ತಾರೆ. ಆದರೆ, ನಿಜವಾದ ಕಾರ್ಯಕರ್ತರು ಸೋತರೂ ಗೆದ್ದರೂ ಪಕ್ಷದಲ್ಲೇ ಇರುತ್ತಾರೆ’ ಎಂದು ತಿಳಿಸಿದರು. ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ಬಸವರಾಜ ಬಿರಬಟ್ಟಿ, ಸೂರ್ಯಕಾಂತ ಕೊರಳ್ಳಿ ಮಾತನಾಡಿದರು.

ಪಕ್ಷದ ರಾಯಚೂರು ವೀಕ್ಷಕ ಮಹಾಂತೇಶ ಪಾಟೀಲ, ಅಲ್ಪಸಂಖ್ಯಾತರ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಲಾಲಮಹ್ಮದ್‌, ವಿಕ್ರಮ ಭಟ್‌, ಶಿವಲಿಂಗಯ್ಯ ಸ್ವಾಮಿ ಸಾವಳಗಿ, ಸೋಮನಾಥ ರೆಡ್ಡಿ, ಎಚ್.ಎಸ್‌.ರಾಜೇಂದ್ರಕುಮಾರ, ಅಮಿನೋದ್ದಿನ್‌ ರುಕ್ನೊದ್ದಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.