ADVERTISEMENT

ಪಠ್ಯಪುಸ್ತಕ, ಸಮವಸ್ತ್ರ ವಿತರಣೆಗೆ ಅಗತ್ಯ ಕ್ರಮ

ಶೇ 80ರಷ್ಟು ಪಠ್ಯಪುಸ್ತಕ ಪೂರೈಕೆ– ಶಿಕ್ಷಣಾಧಿಕಾರಿ ಶಂಕ್ರಮ್ಮ ಚಿತ್ತಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:08 IST
Last Updated 25 ಮೇ 2018, 3:08 IST
ಚಿತ್ತಾಪುರ ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ, ಮಾರಾಟ ಮಾಡಲು ಬಂದಿರುವ ಪಠ್ಯಪುಸ್ತಕಗಳು.
ಚಿತ್ತಾಪುರ ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಿತರಣೆ, ಮಾರಾಟ ಮಾಡಲು ಬಂದಿರುವ ಪಠ್ಯಪುಸ್ತಕಗಳು.   

ಚಿತ್ತಾಪುರ: ‘ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈಗಗಲೇ ಇಲಾಖೆಯಿಂದ ಶೇ 80ರಷ್ಟು ಪೂರೈಕೆಯಾಗಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಂಕ್ರಮ್ಮ ಬಿ.ಢವಳಗಿ ಹೇಳಿದ್ದಾರೆ.

ತಾಲ್ಲೂಕಿನಿಂದ 3,36,435 ಪಠ್ಯಪುಸ್ತಕ ಬೇಡಿಕೆ ಸಲ್ಲಿಸಲಾಗಿತ್ತು. 2,64,004 ಪಠ್ಯಪುಸ್ತಕ ಪೂರೈಕೆಯಾಗಿದೆ. ಇನ್ನೂ 72,431 ಪಠ್ಯಪುಸ್ತಕ ಬರಬೇಕಾಗಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು 1,19,479 ಪಠ್ಯಪುಸ್ತಕ ಬೇಡಿಕೆ ಸಲ್ಲಿಸಲಾಗಿತ್ತು. 99,299 ಪಠ್ಯಪುಸ್ತಕ ಬಂದಿವೆ. ಇನ್ನೂ 20,180 ಪಠ್ಯಪುಸ್ತಕ ಬರಬೇಕಾಗಿದೆ. ಕನ್ನಡ, ಆಂಗ್ಲ, ಉರ್ದು ಮತ್ತು ಒಂದು ಸಂಸ್ಕೃತ ಮಾಧ್ಯಮ ಶಾಲೆಗಳಿಗೆ ವಿತರಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಉಚಿತ ಸಮವಸ್ತ್ರ ವಿತರಣೆ ಯೋಜನೆಯಡಿ 1, 2ನೇ ತರಗತಿ ವಿದ್ಯಾರ್ಥಿಗಳಿಗೆ 4,225 ಹಾಗೂ 3, 4ನೇ ವಿದ್ಯಾರ್ಥಿಗಳಿಗೆ 4,587 ಮತ್ತು 5, 6, 7ನೇ ತರಗತಿ ವಿದ್ಯಾರ್ಥಿಗಳಿಗೆ 6,458, ಜತೆಗೆ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 4,938 ಸಮವಸ್ತ್ರ ಬಂದಿವೆ.

ADVERTISEMENT

1, 2ನೇ ತರಗತಿ ವಿದ್ಯಾರ್ಥಿನಿಯರಿಗೆ 4,588, 3, 4ನೇ ತರಗತಿ ವಿದ್ಯಾರ್ಥಿನಿಯರಿಗೆ 5,278, 5,6,7ನೇ ತರಗತಿ ವಿದ್ಯಾರ್ಥಿನಿಯರಿಗೆ 7,155, 8 ರಿಂದ 10ನೇ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬರಬೇಕಾಗಿದೆ. ತಾಲ್ಲೂಕಿಗೆ ಒಟ್ಟು 37,229 ಸಮವಸ್ತ್ರ ಬಂದಿವೆ ಎಂದು ಹೇಳಿದ್ದಾರೆ.

ಎಲ್ಲ ಶಾಲೆಗಳಿಗೆ ಮಾರ್ಚ್ ತಿಂಗಳಲ್ಲೆ ಸಮವಸ್ತ್ರ ವಿತರಣೆ ಮಾಡಲಾಗಿದೆ. ಪಠ್ಯಪುಸ್ತಕವನ್ನು ಚಿತ್ತಾಪುರ, ನಾಲವಾರ, ಶಹಾಬಾದ, ಕಾಳಗಿ ವಲಯವಾರು ಸಿ.ಆರ್.ಪಿ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತಿದೆ. ಅಲ್ಲಿಂದ ಆ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರನ್ನು ಕರೆಯಿಸಿ ಮೇ 28ರಂದು ರವಾನಿಸಲಾಗುವುದು. ಮೇ 30ರಿಂದ ವಿದ್ಯಾರ್ಥಿಗಳಿಗೆ ಹಂಚಲಾಗುವುದು ಎಂದರು.

ಬಿ.ಆರ್.ಪಿ ಮತ್ತು ಸಿ.ಆರ್.ಪಿ ಮೂಲಕ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ಅದಕ್ಕೆಂದು ಇಲಾಖೆಯಿಂದ ಟ್ರಕ್ ಬಾಡಿಗೆ ಆಧಾರದಲ್ಲಿ ನಿಗದಿ ಮಾಡಿಕೊಂಡಿದ್ದು, ಪ್ರತಿ ದಿನ ಒಂದು ವಲಯಕ್ಕೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ ಎಂದು ಮಾಹಿತಿ ನೀಡಿದರು.

**
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಇಲಾಖೆಯ ಯೋಜನೆಯಂತೆ ಉಚಿತವಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ನಡೆಯುತ್ತಿದೆ
ಶಂಕ್ರಮ್ಮ ಬಿ.ಢವಳಗಿ, ಕ್ಷೇತ್ರಶಿಕ್ಷಣಾಧಿಕಾರಿ, ಚಿತ್ತಾಪುರ 

– ಮಲ್ಲಿಕಾರ್ಜುನ ಎಚ್. ಮುಡಬೂಳಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.