ADVERTISEMENT

‘ಪಾತಾಳ ಗಂಗೆ: ಪರಿಸರಕ್ಕೆ ಮಾರಕ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:54 IST
Last Updated 19 ಮೇ 2017, 5:54 IST

ಕಲಬುರ್ಗಿ: ರಾಜ್ಯ ಸರ್ಕಾರದ ಉದ್ದೇಶಿತ ಪಾತಾಳ ಗಂಗೆ ಯೋಜನೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್‌) ತೀವ್ರ ವಿರೋಧ ವ್ಯಕ್ತಪಡಿಸಿದೆ. ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡದೇ ಅನುಷ್ಠಾನಗೊಳಿಸಬಾರದು ಎಂದು ಸಮಿತಿ ಆಗ್ರಹಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜಿವಿಎಸ್‌ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶುಭಾಂಕರ ಚಕ್ರವರ್ತಿ ಮಾತನಾಡಿ, ‘ಅವೈಜ್ಞಾನಿಕವಾದ ಈ ಯೋಜನೆಯಿಂದ ಪರಿಸರದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ. ನಿಖರ ಮಾಹಿತಿ ಮತ್ತು ತಜ್ಞರ ಅಭಿಪ್ರಾಯವಿಲ್ಲದೇ ಯೋಜನೆ ಜಾರಿಗೊಳಿಸಲು ಸರ್ಕಾರ ಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಟೀಕಿಸಿದರು.

‘ಯೋಜನೆಯಡಿ ಸರ್ಕಾರವು ಸುಮಾರು 10 ಸಾವಿರ ಅಡಿ ಆಳ ಭೂಮಿ ಕೊರೆಯಲು ಉದ್ದೇಶಿಸಿದೆ. ಆದರೆ, ಅಲ್ಲಿ ಲಭ್ಯವಾಗುವ ಪಳೆಯುಳಿಕೆ ನೀರನ್ನು ಬಳಸಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಪರಿಶೀಲಿಸಿಲ್ಲ. ವೈಜ್ಞಾನಿಕ ಅಧ್ಯಯನ ಅಥವಾ ವಿಜ್ಞಾನಿಗಳಿಂದ ಅಭಿಪ್ರಾಯ ಪಡೆಯುವ ಕಾರ್ಯವೂ ನಡೆದಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಯೋಜನೆಯಿಂದ ಬಹುರಾಷ್ಟ್ರೀಯ ಕಂಪೆನಿಗೆ ಆರ್ಥಿಕ ಲಾಭವಾಗುವುದೇ ಹೊರತು ನೀರಿನ ಸಮಸ್ಯೆ ನೀಗುವುದಿಲ್ಲ. ಭೂಗರ್ಭದ ಆಳದಲ್ಲಿ ನೀರಿನ ಹರಿವು, ಪ್ರವಾಹವಿದೆ ಎಂಬ ಭ್ರಮೆ ಮೂಡಿಸಲಾಗುತ್ತಿದೆ. ಆದರೆ, ಲಕ್ಷಾಂತರ ವರ್ಷಗಳಿಂದ ಶೇಖರಣೆಯಾಗಿರುವ ಪಳೆಯುಳಿಕೆ ನೀರನ್ನು ಬಳಸಲು ಯೋಗ್ಯವಿರುವುದಿಲ್ಲ’ ಎಂದು ವಿವರಿಸಿದರು.

‘ಜಲತಜ್ಞರು, ವಿಜ್ಞಾನಿಗಳು ಮತ್ತು ಪರಿಸರವಾದಿಗಳ ವಿರೋಧದ ನಡುವೆಯೂ ಸರ್ಕಾರದ ಆತುರ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆರೆಗಳ ಪುನಃಶ್ಚೇತನ, ಅಂತರ್ಜಲ ಮರುಪೂರಣ ಮುಂತಾದ ಪರ್ಯಾಯ ಮಾರ್ಗಗಳಿರುವಾಗ ಪರಿಸರಕ್ಕೆ ಮಾರಕವಾಗಬಲ್ಲ ಯೋಜನೆಗೆ ಸರ್ಕಾರ ಆಸಕ್ತಿ ತೋರುತ್ತಿರುವುದು ವಿಷಾದನೀಯ’ ಎಂದರು.

ಸಮಿತಿ ಸದಸ್ಯ ಎಫ್‌.ಸಿ.ಚೆಗರೆಡ್ಡಿ ಮಾತನಾಡಿ, ‘ಭೂಗರ್ಭದ ಆಳದಿಂದ ತೆಗೆಯಲಾಗುವ ನೀರಿನಲ್ಲಿ ಲವಣಾಂಶ, ಫ್ಲೋರೈಡ್, ಆರ್ಸೆನಿಕ್‌ನಂತಹ ಅಪಾಯಕಾರಿ ಅಂಶಗಳು ಇರುತ್ತವೆ. ಆ ನೀರನ್ನು ಸೇವಿಸಿದ್ದಲ್ಲಿ ಅನಾರೋಗ್ಯ ಉಂಟಾಗುತ್ತದೆ. ಫ್ಲೋರೈಡ್‌ ನೀರು ಸೇವನೆಯಿಂದ ಈಗಾಗಲೇ ಬಹುತೇಕ ಕಡೆ ಜನರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ’ ಎಂದರು.

‘ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರವು ಯಾವುದೇ ಕಾರಣಕ್ಕೂ ಯೋಜನೆಯನ್ನು ಅನುಷ್ಠಾನಗೊಳಿಸಬಾರದು. ಪರಿಸರ ಸಂರಕ್ಷಣೆಗೆ ಪೂರಕವಾದ ಯೋಜನೆ ಅಗತ್ಯವಿದೆಯೇ ಹೊರತು ಪರಿಸರಕ್ಕೆ ಹಾನಿ ಉಂಟು ಮಾಡುವಂತಹದ್ದಲ್ಲ’ ಎಂದು ಹೇಳಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣ ಪಿ.ಮುಳೆಗಾಂವ್, ಜಂಟಿ ಕಾರ್ಯದರ್ಶಿ ಮುರುಗೇಶ ಕರ್ಕಿಕಟ್ಟಿ, ಸದಸ್ಯ ನಾಗೇಂದ್ರ ಔರಾದ ಇದ್ದರು.

ಪಾತಾಳ ಗಂಗೆ ಯೋಜನೆ ಏಕೆ ಬೇಡ?

*ಸಮರ್ಪಕ ವೈಜ್ಞಾನಿಕ ತಳಹದಿ ಇಲ್ಲ
*ಭೂಗರ್ಭದ ಆಳದಲ್ಲಿ ವಿಷಯುಕ್ತ ಅಂಶವುಳ್ಳ ನೀರು
*ನೀರಿನ ಶುದ್ಧೀಕರಣಕ್ಕೆ ಭಾರಿ ವೆಚ್ಚ. ತ್ಯಾಜ್ಯ ವಿಲೇವಾರಿ ಕಷ್ಟ
*ಪರಿಸರ ಅಸಮತೋಲನ, ಜೀವ ಸಂಕುಲಕ್ಕೆ ಮಾರಕ
*ಗಣಿ, ಭೂವಿಜ್ಞಾನ ಇಲಾಖೆ ತಜ್ಞರಿಂದ ಸರ್ಕಾರ ವರದಿ ಪಡೆದಿಲ್ಲ
*ಅಮೆರಿಕಾ, ಸೌದಿ ಅರೇಬಿಯಾದಲ್ಲಿ ಯೋಜನೆ ವಿಫಲ

*

ಅಮೆರಿಕಾದ ವಾಟರ್‌ಕ್ವೆಸ್ಟ್ ಕಂಪೆನಿ ತನ್ನ ವೆಬ್‌ಸೈಟ್‌ನಲ್ಲಿ ಭೂಮಿಯನ್ನು ಆಳವಾಗಿ ಕೊರೆಯುವುದರ ಬಗ್ಗೆ ಮಾಹಿತಿ ನೀಡಿದೆಯೇ ಹೊರತು, ಪಾತಾಳ ಗಂಗೆ ಯೋಜನೆ ಬಗ್ಗೆ ಏನನ್ನೂ ತಿಳಿಸಿಲ್ಲ
ಎಫ್‌.ಸಿ.ಚೆಗರೆಡ್ಡಿ
ಸದಸ್ಯ, ಬಿಜಿವಿಎಸ್‌ ರಾಜ್ಯ ಸಮಿತಿ

*

ಮಳೆನೀರು ಸಂಗ್ರಹಿಸುವ, ನೀರಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸರ್ಕಾರ ತೊಡಗಬೇಕೆ ಹೊರತು, ಪರಿಸರ ವಿರೋಧಿ ಯೋಜನೆಗೆ ಮುಂದಾಗಬಾರದು

ಶ್ರೀಶೈಲ ಗೂಳಿ
ಸದಸ್ಯ, ಬಿಜಿವಿಎಸ್‌ ಜಿಲ್ಲಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.