ADVERTISEMENT

ಪ್ರತಾಪಸಿಂಹ ಬಂಧನ ಸಿಎಂ ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣ: ಯಡಿಯೂರಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 12:55 IST
Last Updated 3 ಡಿಸೆಂಬರ್ 2017, 12:55 IST
ಪ್ರತಾಪಸಿಂಹ ಬಂಧನ ಸಿಎಂ ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣ: ಯಡಿಯೂರಪ್ಪ ಆಕ್ರೋಶ
ಪ್ರತಾಪಸಿಂಹ ಬಂಧನ ಸಿಎಂ ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣ: ಯಡಿಯೂರಪ್ಪ ಆಕ್ರೋಶ   

ಕಲಬುರ್ಗಿ: ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೇಡಿನ ರಾಜಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಪಸಿಂಹ ಹಾಗೂ ಕಾರ್ಯಕರ್ತರನ್ನು ಬೇಷರತ್ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಡಿ.4ರಂದು ಹುಣಸೂರು ಬಂದ್ ನಡೆಸಲಾಗುವುದು. ಅಲ್ಲದೆ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುಡುಗಿದರು.

ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿರುವ ಸಿದ್ದರಾಮಯ್ಯ ಇನ್ನು ಮೂರು ತಿಂಗಳು ಮಾತ್ರ ಅಧಿಕಾರದಲ್ಲಿ ಇರುತ್ತಾರೆ, ಹೀಗಾಗಿ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

ಕಲಬುರ್ಗಿ ಜಿಲ್ಲೆ ಅಫಜಲಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿವರ್ತನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಸಾಲ ಮಾಡಿಯಾದರೂ ಹಣ ತರುತ್ತೇನೆ
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಲ ಮಾಡಿಯಾದರೂ ಹಣ ತರುತ್ತೇನೆ. ಇಲ್ಲವಾದಲ್ಲಿ ನಿಮಗೆ ಮುಖ ತೋರಿಸುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ನುಡಿದರು.

ಅಭ್ಯರ್ಥಿಗಳನ್ನು ಅಮಿತ್ ಶಾ ಆಗಲಿ, ನಾನಾಗಲಿ ಆಯ್ಕೆ ಮಾಡುವುದಿಲ್ಲ. ಸಮೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಮಲೇಷ್ಯಾದಿಂದ ಮರಳು ಪೂರೈಕೆ; ನಾಚಿಕೆಗೇಡಿ ವಿಷಯ
ಮಲೇಷಿಯಾ ದಿಂದ ಮರಳು ತರುವ ತೀರ್ಮಾನ ನಾಚಿಕೆಗೇಡಿನ ವಿಷಯ. ಯಾವುದೇ ಕಾರಣಕ್ಕೂ ಅಲ್ಲಿಂದ ಮರಳು ತರಲು ಬಿಡುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಿದೆ. ಆದರೆ, ಸಿದ್ದರಾಮಯ್ಯ ಅವರು ಅದನ್ನು ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ಲೋಕೋಪಯೋಗಿ ಸೇರಿ ಹಲವು ಸಚಿವರ ಪುತ್ರರು ಮರಳು ದಂಧೆಯಲ್ಲಿ ತೊಡಗಿದ್ದಾರೆ. ಇದನ್ನು ಮೊದಲು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.