ADVERTISEMENT

ಪ್ರೌಢಶಾಲೆ, ಪಿಯು ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 26 ಮೇ 2017, 7:40 IST
Last Updated 26 ಮೇ 2017, 7:40 IST

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ಈ ಭಾಗದಲ್ಲಿ ತಲಾ 60 ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಿದೆ.

‘ಕಟ್ಟಡ, ಮೂಲಸೌಲಭ್ಯ, ಶಿಕ್ಷಕರ ವೇತನ ಹಾಗೂ ನಿರ್ವಹಣಾ ವೆಚ್ಚವನ್ನು ಮೂರು ವರ್ಷಗಳ ಕಾಲ ಮಂಡಳಿಯೇ ಭರಿಸುತ್ತದೆ. ಆ ನಂತರ ಈ ಶಾಲಾ–ಕಾಲೇಜುಗಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತ ರಿಸ­ಲಾಗುವುದು. ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಮಂಡಳಿಯ ಅಧ್ಯಕ್ಷ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇವುಗಳ ನಿರ್ವಹಣೆಗೆ ವರ್ಷಕ್ಕೆ ₹25 ಕೋಟಿ ತಗಲುವ ಅಂದಾಜಿದೆ. ಶಿಕ್ಷಣ ಮತ್ತು ಹಣಕಾಸು ಇಲಾಖೆ­ಗಳೊಂದಿಗೆ ಚರ್ಚಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 5,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಹೊಸದಾಗಿ ಆರಂಭಿಸಲಿರುವ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಬೇಕಿರುವ ಶಿಕ್ಷಕರು–ಉಪನ್ಯಾಸಕರನ್ನೂ ಶಿಕ್ಷಣ ಇಲಾಖೆಯೇ ನೇಮಕ ಮಾಡಲಿದೆ’ ಎಂದರು.

‘ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ಕೌಶಲ ವೃದ್ಧಿಗೆ ವಿಶೇಷ ತರಬೇತಿ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಈ ಭಾಗಕ್ಕೆ ಸೆಳೆಯಲು ಅವರಿಗೆ ಜಮೀನು ಅಥವಾ ಒಂದು ಅವಧಿಗೆ ಮೂಲಸೌಲಭ್ಯವನ್ನು ಮಂಡಳಿ ಯಿಂದ ಕಲ್ಪಿಸುವ ಚಿಂತನೆ ಇದೆ. ಕೈಗಾ ರಿಕಾ ನೀತಿಯಲ್ಲಿ ಸೌಲಭ್ಯ ಘೋಷಿಸಿ ದ್ದರೂ ಈ ಭಾಗದಲ್ಲಿ ಹೊಸ ಕೈಗಾರಿಕೆ ಗಳು ಸ್ಥಾಪನೆಯಾಗುತ್ತಿಲ್ಲ. ತೆರಿಗೆ ವಿನಾಯಿತಿ ಅಥವಾ ತೆರಿಗೆ ಮರುಪಾವತಿ ಯಂತಹ ಯೋಜನೆ ಜಾರಿಗೆ ತರುವ ಚರ್ಚೆ ನಡೆದಿದೆ. ಈ ಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ಮಂಡಳಿ ಆದ್ಯತೆ ನೀಡಲಿದೆ’ ಎಂದು ಅವರು ಹೇಳಿದರು.

ಆರೋಗ್ಯ ಕೇಂದ್ರ: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಸ್ತರಣಾ ಘಟಕಗಳನ್ನು ಆರಂಭಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅಲ್ಲಿ ಒಬ್ಬ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ. ಈ ಭಾಗದಲ್ಲಿ ಇಂತಹ ಘಟಕಗಳ ಸ್ಥಾಪನೆಗೆ ಬೇಕಿರುವ ಕಟ್ಟಡ, ಮೂಲಸೌಲಭ್ಯವನ್ನು ಮಂಡಳಿಯ ಅನುದಾನದಿಂದದಲೇ ಕಲ್ಪಿಸಲಾಗು ವುದು’ ಎಂದು ಹೇಳಿದರು.ಮಂಡಳಿಗೆ ಸರ್ಕಾರ ಈ ವರೆಗೆ ₹2,080 ಕೋಟಿ ಬಿಡುಗಡೆ ಮಾಡಿದೆ. ಈ ಮೊತ್ತದಲ್ಇ ₹1,600 ಕೋಟಿ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

* * 

ಗ್ರಾಮೀಣ ಪ್ರದೇಶದಲ್ಲಿ ಶಾಲಾ–ಕಾಲೇಜುಗಳ ಕೊರತೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡಾ.ಶರಣಪ್ರಕಾಶ ಪಾಟೀಲ,
ಎಚ್‌ಕೆಆರ್‌ಡಿಬಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.