ADVERTISEMENT

ಮಳೆ ನಿಂತರೂ ನಿಲ್ಲದ ಅವಾಂತರ..!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:26 IST
Last Updated 16 ಸೆಪ್ಟೆಂಬರ್ 2017, 6:26 IST
ಕಲಬುರ್ಗಿಯ ರಾಷ್ಟ್ರಪತಿ ಚೌಕ ಸಮೀಪದ ಕೆಎಸ್‌ಐಡಿಸಿ ವಾಣಿಜ್ಯ ಮಳಿಗೆಗೆ ನುಗ್ಗಿದ್ದ ನೀರನ್ನು ಶುಕ್ರವಾರ ಪಂಪ್‌ ಮೂಲಕ ಹೊರಹಾಕಲಾಯಿತು(ಎಡಚಿತ್ರ), ಕೋಟೆ ಸಮೀಪದ ಕೆರೆಯ ಪಕ್ಕದಲ್ಲಿರುವ ಚರಂಡಿಯನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು
ಕಲಬುರ್ಗಿಯ ರಾಷ್ಟ್ರಪತಿ ಚೌಕ ಸಮೀಪದ ಕೆಎಸ್‌ಐಡಿಸಿ ವಾಣಿಜ್ಯ ಮಳಿಗೆಗೆ ನುಗ್ಗಿದ್ದ ನೀರನ್ನು ಶುಕ್ರವಾರ ಪಂಪ್‌ ಮೂಲಕ ಹೊರಹಾಕಲಾಯಿತು(ಎಡಚಿತ್ರ), ಕೋಟೆ ಸಮೀಪದ ಕೆರೆಯ ಪಕ್ಕದಲ್ಲಿರುವ ಚರಂಡಿಯನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು   

ಕಲಬುರ್ಗಿ: ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಆದ ಅನಾಹುತದಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಚರಂಡಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ. ವಾಣಿಜ್ಯ ಮಳಿಗೆಗಳ ನೆಲಮಹಡಿಯಲ್ಲಿ ಸಂಗ್ರಹವಾಗಿರುವ ನೀರನ್ನು ಹೊರ ಹಾಕುವ ಕೆಲಸ ನಡೆದಿದೆ. ಮಳಿಗೆಗಳ ಮಾಲೀಕರು ಹಾಗೂ ಪಾಲಿಕೆ ಸಿಬ್ಬಂದಿ ಪಂಪ್ ಬಳಸಿ ನೀರು ಹೊರಹಾಕುತ್ತಿದ್ದಾರೆ.

ರಾಷ್ಟ್ರಪತಿ ಚೌಕ್‌ ಪಕ್ಕದಲ್ಲಿರುವ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್‌ಐಡಿಸಿ)ದ ಮಳಿಗೆ, ಬಸ್ ನಿಲ್ದಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಖಾದ್ರಿ ಚೌಕ್, ಜಲಾಲವಾಡಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿರುವ ನೆಲಮಹಡಿ ವಾಣಿಜ್ಯ ಮಳಿಗೆಗಳಲ್ಲಿನ ನೀರನ್ನು ಹೊರಹಾಕಲಾಗುತ್ತಿದೆ.

ಲಾಲಗೇರಿ ಕ್ರಾಸ್ ಬಳಿ ರಾಜಕಾಲುವೆ, ಒಳಚರಂಡಿ ನಿರ್ಮಿಸಿದ್ದರೂ ಚರಂಡಿ ನೀರು ರಸ್ತೆಯ ಮೇಲೆ ಹರಿದಿದೆ. ಅಲ್ಲದೆ ಕೋಟೆ ಪಕ್ಕದ ಕೆರೆಯ ನೀರು ರಸ್ತೆ ಮೇಲೆ ಹರಿದು ಶರಣಬಸವೇಶ್ವರ ಕೆರೆಗೆ ಸೇರಿದೆ. ಹೀಗಾಗಿ ರಾಜಕಾಲುವೆ ಮೂಲಕ ಈ ನೀರನ್ನು ಹೊರಹಾಕಲಾಗುತ್ತಿದೆ.

ADVERTISEMENT

ಚರಂಡಿ ನಿರ್ಮಾಣಕ್ಕೆ ಕ್ರಮ: ‘ಖಾಜಾ ಬಂದಾ ನವಾಜ್ (ಕೆಬಿಎನ್‌) ಆಸ್ಪತ್ರೆಯ ಸಾಮಾನ್ಯ ರೋಗಿಗಳ ವಾರ್ಡ್‌ಗೆ ನುಗ್ಗಿದ್ದ ಮಳೆ ನೀರನ್ನು ಹೊರಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ರೋಗಿಯನ್ನು ಇಲ್ಲಿ ದಾಖಲು ಮಾಡಿಲ್ಲ. ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಮೊಯಿನುದ್ದೀನ್‌ ತಿಳಿಸಿದರು.

ಪರಸ್ಪರ ದೂರು: ಪಾಲಿಕೆ ಅಧಿಕಾರಿಗಳು, ಪೌರ ಕಾರ್ಮಿಕರು ಸರಿಯಾಗಿ ಕೆಲಸ ಮಾಡದ್ದರಿಂದ ಪ್ರತಿ ವರ್ಷ ತೊಂದರೆ ಅನುಭವಿಸುವಂತಾಗಿದೆ ಎಂದು ತಗ್ಗು ಪ್ರದೇಶದ ಬಡಾವಣೆಗಳ ನಿವಾಸಿಗಳು ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರು ಆರೋಪಿಸುತ್ತಾರೆ. ಆದರೆ ಪಾಲಿಕೆ ಅಧಿಕಾರಿಗಳು ಇದನ್ನು ಅಲ್ಲಗಳೆಯುತ್ತಾರೆ.

‘ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಜನರು ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್‌ಗಳನ್ನು ಚರಂಡಿಯಲ್ಲೇ ಎಸೆಯುತ್ತಾರೆ. ಇದರಿಂದ ಚರಂಡಿಗಳು ಕಟ್ಟಿಕೊಳ್ಳುತ್ತವೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಮನೆಗಳಿಗಳಿಗೆ ನುಗ್ಗುತ್ತದೆ. ಆದ್ದರಿಂದ ಜನರೂ ಕೂಡ ಪಾಲಿಕೆಯೊಂದಿಗೆ ಸಹಕರಿಸಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಎಂಜಿನಿಯರ್‌ರೊಬ್ಬರು ಹೇಳುತ್ತಾರೆ.

‘ನಗರದಲ್ಲಿ ಯಾವುದೇ ಚರಂಡಿಗಳು ಕಟ್ಟಿಕೊಂಡಿಲ್ಲ. ಮಳೆ ಜಾಸ್ತಿಯಾಗಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ಬಹುತೇಕ ಚರಂಡಿಗಳು ಕಟ್ಟಿಕೊಂಡಿವೆ. ಪಾಲಿಕೆ ಪೌರ ಕಾರ್ಮಿಕರು ನಿಯಮಿತವಾಗಿ ಸ್ವಚ್ಛತಾ ಕಾರ್ಯಕೈಗೊಳ್ಳುವುದಿಲ್ಲ. ಪಾಲಿಕೆ ಸದಸ್ಯರು ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ’ ಎಂದು ಜಿ.ಆರ್.ನಗರದ ನಿವಾಸಿ ರಾಜಪ್ಪ ಆರೋಪಿಸುತ್ತಾರೆ.

‘ಎರಡು ತಿಂಗಳಿನಿಂದ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಅಧಿಕ ಮಳೆಯಿಂದ ತೊಂದರೆ ಉಂಟಾಗುವ ಪ್ರದೇಶಗಳಲ್ಲಿ ಚರಂಡಿ, ರಾಜಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ 15 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ತಗ್ಗು ಪ್ರದೇಶದ ಮನೆಗಳಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಣಿಜ್ಯ ಮಳಿಗೆಗಳ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ಜಾಗ ಮೀಸಲಿಡಬೇಕು. ಆದರೆ ಬಹುತೇಕರು ಬಾಡಿಗೆಗೆ ಕೊಟ್ಟಿದ್ದಾರೆ. ಈಗ ಮಳೆ ನೀರು ನುಗ್ಗಿ ನಷ್ಟ ಅನುಭವಿಸಿದ್ದು, ಪಾಲಿಕೆಯನ್ನು ಶಪಿಸುತ್ತಿದ್ದಾರೆ. ಇದರಲ್ಲಿ ಪಾಲಿಕೆಯದ್ದು ತಪ್ಪಿಲ್ಲ. ಮಳಿಗೆಗಳ ಮಾಲೀಕರಿಗೆ ಅಂಗಡಿ ತೆರವುಗೊಳಿಸುವಂತೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.