ADVERTISEMENT

ಮುಂಗಾರು; 6.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಅಗತ್ಯ ಪ್ರಮಾಣದ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2018, 7:24 IST
Last Updated 20 ಮೇ 2018, 7:24 IST
ಮುಂಗಾರು; 6.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ಮುಂಗಾರು; 6.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ   

ಕಲಬುರ್ಗಿ: ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತರು ಭೂಮಿ ಹದಗೊಳಿಸುತ್ತಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ಕೂಡ ಈ ನಿಟ್ಟಿನಲ್ಲಿ ಸನ್ನದ್ಧವಾಗಿದೆ.

ಜಿಲ್ಲೆಯಲ್ಲಿ 8 ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದ್ದು, ಈ ಪೈಕಿ 6.32 ಲಕ್ಷ ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಈಗಾಗಲೇ ಸಂಗ್ರಹಿಸಿ ಇಡಲಾಗಿದೆ. 6.73 ಲಕ್ಷ ಹೆಕ್ಟೇರ್ ಪೈಕಿ 4.34 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯುವ ಗುರಿ ಹೊಂದಲಾಗಿದೆ.

ಭತ್ತ 1,360 ಹೆಕ್ಟೇರ್, ಜೋಳ 1,525 ಹೆಕ್ಟೇರ್, ಮೆಕ್ಕೆ ಜೋಳ 4,650 ಹೆಕ್ಟೇರ್, ಸಜ್ಜೆ 14,200 ಹೆಕ್ಟೇರ್‌, ತೊಗರಿ (ನೀರಾವರಿ) 2,800 ಹೆಕ್ಟೇರ್, ಹುರಳಿ 200 ಹೆಕ್ಟೇರ್, ಉದ್ದು 27,800 ಹೆಕ್ಟೇರ್, ಹೆಸರು 47,100 ಹೆಕ್ಟೇರ್,
ಅಲಸಂಧಿ 100 ಹೆಕ್ಟೇರ್, ಮಡಕಿ 100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ADVERTISEMENT

ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಗುರೆಳ್ಳು, ಸೋಯಾಬಿನ್, ವಾಣಿಜ್ಯ ಬೆಳೆ
ಹತ್ತಿ, ಕಬ್ಬು ಬೆಳೆಯುವ ರೈತರಿಗೆ ಈಗಾಗಲೇ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

‘ರೈತರು ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬೇಕು. ಕಡ್ಡಾಯವಾಗಿ ರಶೀತಿ ಪಡೆಯಬೇಕು. ಆಂಧ್ರಪ್ರದೇಶದ ಕೆಲವು ಕಂಪನಿಗಳು ನಕಲಿ ಬೀಜಗಳನ್ನು ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ. ರೈತರು ಕೂಡ ಸಾಕಷ್ಟು ಜಾಗೃತಿ ವಹಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೀಂದ್ರನಾಥ ಸೂಗೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಇಲಾಖೆಯಿಂದ ರೈತರಿಗೆ ಲಭ್ಯವಿರುವ ಯೋಜನೆಗಳು, ಉಪಕರಣಗಳು, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬಗ್ಗೆ ಮಾಹಿತಿ ನೀಡಲು ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಹಂಚಲಾಗುವುದು. ಕೃಷಿ ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗುವುದು. ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ರೈತರು ಮಾಹಿತಿ ಪಡೆಯಬಹುದು’ ಎಂದು ಹೇಳಿದರು.

ಬೀಜಗಳು;ಪ್ರಮಾಣ

ತೊಗರಿ;18ಸಾವಿರ ಕ್ವಿಂಟಲ್
ಹೆಸರು;2500 ಕ್ವಿಂಟಲ್
ಉದ್ದು;2ಸಾವಿರ ಕ್ವಿಂಟಲ್
ಸೂರ್ಯಕಾಂತಿ;1ಸಾವಿರ ಕ್ವಿಂಟಲ್

**
ಮೇ ಕೊನೆ ವಾರದಲ್ಲಿ ಜಿಲ್ಲೆಯ 32 ಹೋಬಳಿಗಳಲ್ಲಿ ಕೃಷಿ ಅಭಿಯಾನ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು. ರೈತರು ಇಲಾಖೆಯಿಂದ ಮಾಹಿತಿ ಪಡೆಯಬಹುದು
- ರತೀಂದ್ರನಾಥ ಸೂಗೂರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.