ADVERTISEMENT

ರೈತರ ಆದಾಯ ದ್ವಿಗುಣಕ್ಕೆ ಕ್ರಮ: ಕಮ್ಮರಡಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 5:40 IST
Last Updated 22 ಜುಲೈ 2017, 5:40 IST

ಕಲಬುರ್ಗಿ: ‘ಕೃಷಿ ವಿಜ್ಞಾನಿಗಳು ಎಲ್ಲ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸಬೇಕು. ಆ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ‘ರೈತರ ಆದಾಯ ದ್ವಿಗುಣ’ ಪ್ರಾಯೋಗಿಕ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.‘ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಇದಕ್ಕೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದ್ದು, ಆಳಂದ ತಾಲ್ಲೂಕು ತೆಲ್ಲೂರ ಗ್ರಾಮವನ್ನು ಈ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ 52 ಪ್ರಮುಖ ಯೋಜನೆಗಳ ಲಾಭವನ್ನು ರೈತರಿಗೆ ತಲುಪಿಸಬೇಕು. ಆ ಮೂಲಕ ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು’ ಎಂದು ಸೂಚಿಸಿದರು.

ADVERTISEMENT

‘ಬರೀ ಕೃಷಿಯನ್ನೇ ನಂಬಿಕೊಂಡರೆ ಆರ್ಥಿಕ ಅಭಿವೃದ್ಧಿ ಕಷ್ಟ. ಕೃಷಿ ಜತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ, ರೇಷ್ಮೆ, ತೋಟಗಾರಿಕೆ ಮತ್ತು ಸಸಿಗಳನ್ನು ಬೆಳೆಸಲು ರೈತರು ಮುಂದಾಗಬೇಕು. ಸಮಗ್ರ ಕೃಷಿ ಕೈಗೊಂಡಲ್ಲಿ ಮಾತ್ರ ಋಣಮುಕ್ತರಾಗಿ ಬದುಕಲು ಸಾಧ್ಯ’ ಎಂದು ಹೇಳಿದರು.

‘ಕೃಷಿ, ತೋಟಗಾರಿಕೆ, ಅರಣ್ಯ, ನಬಾರ್ಡ್, ಲೀಡ್ ಬ್ಯಾಂಕ್, ಆರೋಗ್ಯ, ರೇಷ್ಮೆ, ಪಶು ಸಂಗೋಪನೆ ಇಲಾಖೆಗಳ ಅಧಿಕಾರಿಗಳು ತೆಲ್ಲೂರ ಗ್ರಾಮಕ್ಕೆ ಭೇಟಿ ನೀಡಬೇಕು. ರೈತರ ಆದಾಯ ವೃದ್ಧಿಗೆ ಯಾವ ಯಾವ ಯೋಜನೆಗಳು, ಯಂತ್ರೋಪಕರಣಗಳನ್ನು ಅವರಿಗೆ ಒದಗಿಸಬೇಕು, ಯಾವ ಬೆಳೆಗಳನ್ನು ಬೆಳೆಯಲು ರೈತರು ಉತ್ಸುಕರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿ ಸೋಮವಾರ ಈ ಗ್ರಾಮಕ್ಕೆ ಭೇಟಿ ನೀಡಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ರೈತರೊಂದಿಗೆ ಸಂವಾದ ನಡೆಸಬೇಕು’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಮಾತನಾಡಿ, ‘ತೆಲ್ಲೂರ ಗ್ರಾಮದ ರೈತರ ಆದಾಯ ದ್ವಿಗುಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಎಲ್ಲ ಇಲಾಖೆಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲಾಗುವುದು. ಪ್ರತಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಬೇಕಾದ ಅಗತ್ಯ ಸಲಹೆ ನೀಡಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ತೆಲ್ಲೂರ ಗ್ರಾಮದ 25 ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.