ADVERTISEMENT

ಸಮಸ್ಯೆಗಳ ಆಗರ ಸಂಕನೂರು ಗ್ರಾಮ

ಸಿದ್ದರಾಜ ಎಸ್.ಮಲಕಂಡಿ
Published 14 ನವೆಂಬರ್ 2017, 7:02 IST
Last Updated 14 ನವೆಂಬರ್ 2017, 7:02 IST
ವಾಡಿ ಸಮೀಪದ ಸಂಕನೂರು ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಇಲ್ಲದ ಕಾರಣ ಕೊಳಚೆ ನೀರಿನ ಮೇಲೆ ಸಾಗುವುದು ಅನಿವಾರ್ಯವಾಗಿದೆ
ವಾಡಿ ಸಮೀಪದ ಸಂಕನೂರು ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಇಲ್ಲದ ಕಾರಣ ಕೊಳಚೆ ನೀರಿನ ಮೇಲೆ ಸಾಗುವುದು ಅನಿವಾರ್ಯವಾಗಿದೆ   

ವಾಡಿ: ಬೆಟ್ಟದ ತುತ್ತ ತುದಿಯಲ್ಲಿರುವ ಚಿತ್ತಾಪೂರ ತಾಲ್ಲೂಕಿನ ಸಂಕನೂರು ಗ್ರಾಮವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಸುತ್ತಮುತ್ತಲೂ ಕಾಡು, ಬೆಟ್ಟಗಳಿಂದ ಆವೃತ್ತವಾಗಿರುವ ಈ ಗ್ರಾಮ ಅಭಿವೃದ್ದಿ ಕಾಣದೇ ಸರ್ಕಾರಿ ಯೋಜನೆಗಳಿಂದ ವಂಚಿತಗೊಂಡಿದೆ. ಗ್ರಾಮಕ್ಕೆ ಒದಗಿಸಲಾದ ಸರ್ಕಾರಿ ಸೌಲಭ್ಯಗಳೆಲ್ಲವೂ ಕಾಗದಲ್ಲಿ ಮಾತ್ರ ಇವೆಯೇ ಹೊರತು ಜಾರಿಗೆ ಬಂದಿಲ್ಲ. ಸರ್ಕಾರಿ ಕಡತಗಳಲ್ಲಿ ಮಾತ್ರ ಸಂಕನೂರು ಗ್ರಾಮದ ಅಭಿವೃದ್ಧಿ ಯೋಜನೆಗಳು ಆಗುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಅಳ್ಳೋಳ್ಳಿ ಗ್ರಾ.ಪಂ ವ್ಯಾಪ್ತಿಗೆ ಬರುವ ಸಂಕನೂರು ಗ್ರಾಮವು ಸುಮಾರು 1,500ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. 1,000ಕ್ಕೂ ಅಧಿಕ ಮತದಾರರನ್ನು ಹೊಂದಿರುವ ಈ ಗ್ರಾಮ, 4 ಜನ ಪಂಚಾಯಿತಿ ಸದಸ್ಯರನ್ನು ಹೊಂದಿದೆ.

ನಾಗರಿಕ ಸಮಾಜ ನಾಗಲೋಟದಲ್ಲಿ ಮುಂದುವರಿಯುತ್ತಿದೆ. ಆದರೆ, ಈ ಗ್ರಾಮದಲ್ಲಿ ನೀರಿನ ಟ್ಯಾಂಕ್ ಇಲ್ಲದ ಕಾರಣ ಜನರು ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ತೆರೆದ ಬಾವಿಯಿಂದ ತಲೆಯ ಮೇಲೆ ಹಾಗೂ ಬಂಡಿಯ ಮೂಲಕ ಮನೆಗಳಿಗೆ ಸಾಗಿಸುವುದು ಇಲ್ಲಿ ಸಾಮಾನ್ಯವಾಗಿದೆ.

ADVERTISEMENT

ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಿಂದ ಪೈಪ್‌ಲೈನ್ ಕಾಮಗಾರಿ ಮಾಡಿ ಅದರ ಮೂಲಕ ಹೊಸ ಬಡಾವಣೆಯ ಒಂದು ಗುಮ್ಮಿಗೆ ನೀರು ಹರಿಸಲಾಗುತ್ತಿದೆ. ವಿದ್ಯುತ್ ಇದ್ದರೆ ಮಾತ್ರ ನೀರು ಇಲ್ಲಾಂದ್ರೆ ಇಲ್ಲ ಎನ್ನುವ ಪರಿಸ್ಥಿತಿ ಇದೆ.

ಗ್ರಾಮದ ಬಹುತೇಕ ಕಡೆ ಸಿಸಿ ರಸ್ತೆಗಳಿಲ್ಲ. ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆ ತುಂಬಾ ಹರಡಿ ವಾತಾವರಣ ಮಲಿನಗೊಳಿಸಿದೆ. ಕೊಳಚೆ ನೀರು ತುಂಬಿದ ರಸ್ತೆಯಲ್ಲಿ ಜನರು ತಿರುಗುವುದು ಸಾಮಾನ್ಯ ಎನ್ನುವಂತಾಗಿದೆ. ಸಾಮೂಹಿಕ ಶೌಚಾಲಯ ನಿರ್ಮಿಸದ ಕಾರಣ ಗ್ರಾಮಸ್ಥರಿಗೆ ಬಯಲು ಶೌಚ ಅನಿವಾರ್ಯವಾಗಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆ ಹಾಗೂ ನೊಣಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗಭೀತಿಯಲ್ಲಿ ಬದುಕು ನಡೆಸುವಂತಾಗಿದೆ.

ಮರೀಚಿಕೆಯಾದ ಸೌಲಭ್ಯಗಳು: ಸರ್ಕಾರಿ ಸೌಲಭ್ಯಗಳು ಈ ಗ್ರಾಮಸ್ಥರಿಗೆ ಕನ್ನಡಿಯೊಳಗಿನ ಗಂಟು ಎನ್ನುವಂತಾಗಿದೆ. ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲರ ವೇತನದಂತಹ ಸಾಮಾಜಿಕ ಭದ್ರತಾ ಯೋಜನೆಗಳು ಇಲ್ಲಿನ ಜನರಿಗೆ ಮರೀಚಿಕೆಯಾಗಿವೆ. ಬಡ ಕುಟುಂಬಗಳೇ ವಾಸಿಸುತ್ತಿರುವ ಗ್ರಾಮದಲ್ಲಿ ಹಲವರು ಪಡಿತರ ಚೀಟಿ ಹೊಂದಿಲ್ಲ. ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪಡಿತರ ಚೀಟಿ ವಿತರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ಕಾಡುಹಂದಿಗಳ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ರೈತರು ಒಂಟಿಯಾಗಿ ತಮ್ಮ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ನಮ್ಮ ಜಮೀನುಗಳಿಗೆ ನುಗ್ಗುವ ಕಾಡುಹಂದಿಗಳು ಬೆಳೆಗಳನ್ನು ಹಾಳು ಮಾಡುತ್ತಿವೆ ಎನ್ನುತ್ತಾರೆ ರೈತರು.

‘ಸುಮಾರು 60–70 ವರ್ಷಗಳಿಂದ ಗುಡ್ಡಗಾಡಿನ ಜಮೀನನ್ನು ಮಟ್ಟಸ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಅರಣ್ಯ ಇಲಾಖೆ ಏಕಾಏಕಿ ಒಕ್ಕಲೆಬ್ಬಿಸಿ ಗಿಡಗಳನ್ನು ಹಾಕುತ್ತಿದೆ. 2–3 ಎಕರೆ ಸಾಗುವಳಿ ಮಾಡಿಕೊಂಡಿರುವ ನಮ್ಮನ್ನು ಜಮೀನುಗಳಿಂದ ಹೊರಹಾಕಿದರೆ ನಮ್ಮ ಗತಿಯೇನು?’ ಎನ್ನುತ್ತಾರೆ ರೈತ ಮುನಿಯಪ್ಪ ಹೊನಗುಂಟಿ.

‘ತುರ್ತು ಆರೋಗ್ಯದ ಸಮಸ್ಯೆಗಳಿಗಾಗಿ ದೂರದ ಅಳ್ಳೊಳ್ಳಿ ಗ್ರಾಮಕ್ಕೆ ಹೋಗಬೇಕು. ಅಲ್ಲಿ ನೋಡಿದರೆ ವೈದ್ಯರೇ ಇರುವುದಿಲ್ಲ. ಹೀಗಾಗಿ, ದುಬಾರಿ ಬೆಲೆಯ ಖಾಸಗಿ ಆಸ್ಪತ್ರೆ ಅವಲಂಬಿಸುವಂತಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ಈರಣ್ಣ ಸಾಹುಕಾರ. ಪಶು ಆಸ್ಪತ್ರೆಯ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಪಶು ವೈದ್ಯಾಧಿಕಾರಿಗಳು ಊರಿಗೆ ಬರುವುದು ಬಹಳ ಅಪರೂಪ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.