ADVERTISEMENT

ಶಾಲೆಗಿಲ್ಲ ಸ್ವಂತ ಕಟ್ಟಡ: ವಿದ್ಯಾರ್ಥಿಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:14 IST
Last Updated 8 ಫೆಬ್ರುವರಿ 2018, 9:14 IST
ವಾಡಿ ಸಮೀಪದ ಬಾಪುನಗರದ ಸುಬ್ಬನಾಯಕ ತಾಂಡಾದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಬಿಸಿಯೂಟ ತಯಾರಿಸುತ್ತಿರುವುದು
ವಾಡಿ ಸಮೀಪದ ಬಾಪುನಗರದ ಸುಬ್ಬನಾಯಕ ತಾಂಡಾದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಬಿಸಿಯೂಟ ತಯಾರಿಸುತ್ತಿರುವುದು   

ವಾಡಿ: ಸಮೀಪದ ಬಾಪು ನಗರದ ಸುಬ್ಬನಾಯಕ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲಸೌಕರ್ಯದಿಂದ ವಂಚಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡಿರುವ ಈ ತಾಂಡಾದಲ್ಲಿ ಉಸಿರುಗಟ್ಟಿಸುವಂತಹ ಶಿಥಿಲಾವಸ್ಥೆಯ ಅತಿ ಚಿಕ್ಕ ಕೋಣೆಯಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಒಂದೇ ಕೋಣೆಯಲ್ಲಿ 1ರಿಂದ 5ನೇ ತರಗತಿಯವರೆಗಿನ ಮಕ್ಕಳು ಕಲಿಯುತ್ತಿದ್ದಾರೆ. ಅದೇ ಕೋಣೆಯಲ್ಲೇ ಮಕ್ಕಳಿಗೆ ಬಿಸಿಯೂಟ ಹಾಗೂ ಹಾಲು ತಯಾರಿಸಲಾಗುತ್ತದೆ.

ಸುಮಾರು 40ಕ್ಕೂ ಅಧಿಕ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದು ಕಡೆ ಶಿಕ್ಷಕರು ಪಾಠ ಮಾಡುತ್ತಿದ್ದರೆ, ಇನ್ನೊಂದು ಕಡೆ ಬಿಸಿಯೂಟ ತಯಾರು ಮಾಡುತ್ತಾರೆ. ಒಗ್ಗರಣೆ ಮಧ್ಯದಲ್ಲಿ ಮಕ್ಕಳ ಪಾಠ ಪ್ರವಚನ ನಡೆಯುತ್ತಿದೆ.

ಕಳೆದ 10 ವರ್ಷಗಳಿಂದ ಬಾಡಿಗೆ ಕೋಣೆಯಲ್ಲಿ ಈ ಶಾಲೆ ನಡೆಯುತ್ತಿದ್ದು, ಕನಿಷ್ಠ ಮೂಲಸೌಲಭ್ಯಗಳಿಲ್ಲದೇ ಇಲ್ಲಿನ ಮಕ್ಕಳ ಶೈಕ್ಷಣಿಕ ಬದುಕು ಅತಂತ್ರಕ್ಕೆ ಸಿಲುಕಿದೆ. ಕೊಠಡಿ ಕೊರತೆಯಿಂದ ಇಲ್ಲಿನ ಮಕ್ಕಳ ವಿದ್ಯಾಭ್ಯಾಸದ ಕನಸು ಕಮರಿ ಹೋಗುತ್ತಿದೆ.

ADVERTISEMENT

ನಮ್ಮ ಶಾಲೆಯ ಶೋಚನೀಯ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಲಾಗಿದೆ. ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಮಾತ್ರ ಯಾರೊಬ್ಬರೂ ತೋರುತ್ತಿಲ್ಲ. ಕನಿಷ್ಠ ಸೌಕರ್ಯಗಳಿಲ್ಲದ ಈ ಶಾಲೆಗೆ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ? ಬಹುತೇಕ ಬಡ ಕೂಲಿಕಾರ್ಮಿಕರೇ ವಾಸವಾಗಿರುವ ಇಲ್ಲಿನ ಜನರ ಗತಿಯೇನು? ಎನ್ನುತ್ತಾರೆ ನಿವಾಸಿ ಮಾನಿಬಾಯಿ ಶೇವು ಹಾಗೂ ಸೀತರಾಮ ಲಕ್ಷ್ಮಣ.

ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಪಾಲಕರನ್ನು ಹಾಗೂ ಗ್ರಾಮಸ್ಥರನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ಸ್ಥಳೀಯ ಮುಖಂಡ ವೆಂಕಟೇಶ ದುರ್ಗದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.