ADVERTISEMENT

ಅಧಿಕಾರ ಹಿಡಿಯಲು ಪೈಪೋಟಿ

ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:50 IST
Last Updated 5 ಜನವರಿ 2017, 9:50 IST

-ರಘು ಹೆಬ್ಬಾಲೆ

ಕುಶಾಲನಗರ:  ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಜ.12ರಂದು ನಡೆಯಲಿದೆ. ತಮ್ಮ ಬೆಂಬಲಿತ ಅಭ್ಯರ್ಥಿಗಳ ಮೂಲಕ ಸಮಿತಿಯ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಸಜ್ಜಾಗಿವೆ.

1978ರಲ್ಲಿ ಕುಶಾಲನಗರ ಎಪಿಎಂಸಿ ಸ್ಥಾಪನೆಗೊಂಡಿದ್ದು, ಕುಶಾಲನಗರ ಮುಖ್ಯ  ಮಾರುಕಟ್ಟೆಯಾಗಿದ್ದು, ಸೋಮ ವಾರಪೇಟೆ ಉಪ ಮಾರುಕಟ್ಟೆ ಯಾಗಿದೆ. ರೈತರು ಪ್ರತಿನಿಧಿಸುವ ಸಂಸ್ಥೆಯಾಗಿರುವ ಎಪಿಎಂಸಿ ರಾಜಕೀಯೇತರ ಸಂಸ್ಥೆಯಾಗಿ ದ್ದರೂ ಕೂಡ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಗಳು ಗೆಲುವು ಸಾಧಿಸುವ ಹಿನ್ನೆಲೆಯಲ್ಲಿ ಇದು ಕೂಡ ರಾಜಕೀಯದಿಂದ ಹೊರ ಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಎಪಿಎಂಸಿ ಸಮಿತಿಗೆ ಮೊದಲ ಅಧ್ಯಕ್ಷ ರಾಗಿ ಸರ್ಕಾರದ ನಾಮ ನಿರ್ದೇಶಿತ ಅಧ್ಯಕ್ಷ ಜಿ.ಪಿ.ಶಾಂತವೀರಪ್ಪ ಅಧಿಕಾರ ನಡೆಸಿದರು. ನಂತರ 1983ರಲ್ಲಿ ನಡೆದ ಚುನಾವಣೆಯಲ್ಲಿ ಬಗ್ಗನ ಪೊನ್ನಪ್ಪ, ನಂತರದಲ್ಲಿ ಸಿ.ಪಿ. ಗೋಪಾಲ್, ಜಿ.ಎನ್. ರಾಮಪ್ಪ (ಪ್ರಭಾರ), ಎನ್.ಸಿ. ಅಪ್ಪಸ್ವಾಮಿ, ಬಿ.ಎಂ.ಲವ, ಎಸ್.ಪಿ. ಪೊನ್ನಪ್ಪ, ಬಿ.ಬಿ. ಕಾಳಯ್ಯ (ಪ್ರಭಾರ), ಪಿ.ಕೆ. ಶೇಷಪ್ಪ, ಎಂ.ಬಿ. ಜಯಂತ್, ಬಿ.ಬಿ. ಸತೀಶ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಸರ್ಕಾರದಿಂದ ಬರುವ ಅನುದಾನ ಹಾಗೂ ತೆರಿಗೆ ಸಂಗ್ರಹದಿಂದ ಬರುವ ಆದಾಯದಿಂದ ಮಾರುಕಟ್ಟೆ ಅಭಿವೃದ್ಧಿ, ಗ್ರಾಮೀಣ ಮಾರುಕಟ್ಟೆ ಸ್ಥಾಪನೆ, ಒಕ್ಕಲು ಕಣ, ರೈತರ ಜಮೀನಿಗೆ ರಸ್ತೆ ಸಂಪರ್ಕ, ಮಾರುಕಟ್ಟೆಯಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಸಮಿತಿಗೆ ಅಧಿಕಾರವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಕುಶಾಲನಗರ ಎಪಿಎಂಸಿಗೆ 12 ಮಂದಿ ಚುನಾಯಿತರಾಗಬೇಕಾಗಿದ್ದು, ಇದರಲ್ಲಿ 11 ಮಂದಿ ಕೃಷಿ ಕ್ಷೇತ್ರದಿಂದ ಹಾಗೂ ಒಬ್ಬರು ವರ್ತಕರ ಕ್ಷೇತ್ರದಿಂದ ಮತ್ತು 3 ಮಂದಿ ನಾಮ ನಿರ್ದೇಶಿತರು ಆಯ್ಕೆಯಾಗಬೇಕಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣ ಗೊಂಡಿದ್ದು, ಕಣದಲ್ಲಿ 33 ಮಂದಿ ಅಭ್ಯರ್ಥಿಗಳು ಉಳಿದಿದ್ದಾರೆ.

ಶಾಸಕರು ತಮ್ಮ ಬೆಂಬಲಿಗರನ್ನು ಎಪಿಎಂಸಿ ನಿರ್ದೇಶಕರನ್ನಾಗಿಸಲು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೊರೆಯುವ ಚಳಿ ಇದ್ದರೂ ಕೂಡ ಎಪಿಎಂಸಿ ಚುನಾವಣಾ ಕಾವು ಮಾತ್ರ ಏರತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.