ADVERTISEMENT

ಅನುರಾಗ್ ತಿವಾರಿ ಸೇವೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:03 IST
Last Updated 24 ಮೇ 2017, 7:03 IST

ಮಡಿಕೇರಿ: ‘ಕ್ರಿಯಾಶೀಲ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರನ್ನು ಕಳೆದುಕೊಂಡಿರುವುದಕ್ಕೆ ತೀವ್ರ ದುಃಖವಾಗಿದೆ. ಕೊಡಗು ಜಿಲ್ಲಾಧಿಕಾರಿ ಆಗಿದ್ದ ಅವರ ಸೇವೆ ಸ್ಮರಣೀಯ’ ಎಂದು ನಿವೃತ್ತ ಏರ್‌ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಹೇಳಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ‘ಅನುರಾಗ್ ತಿವಾರಿ ಸದಾ ಕ್ರಿಯಾಶೀಲತೆ, ಪಾರದರ್ಶಕತೆ ಆಡಳಿತದಿಂದ ಎಲ್ಲರ ಮೆಚ್ಚುಗೆಗೂ ತಿವಾರಿ ಪಾತ್ರರಾಗಿದ್ದರು’ ಎಂದು ಸ್ಮರಿಸಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಚಾರುಲತಾ ಸೋಮಲ್, ‘ತಿವಾರಿ ಅಕಾಲಿಕ ನಿಧನ ಸಾರ್ವಜನಿಕ ಆಡಳಿತದಲ್ಲಿ ತುಂಬಲಾರದ ನಷ್ಟ’ ಎಂದು ಹೇಳಿದರು. ಪತ್ರಕರ್ತ ಕೆ.ಬಿ.ಮಂಜುನಾಥ್ ಮಾತನಾಡಿ, ‘ಕಾವೇರಿ ನದಿ ಸ್ವಚ್ಛತೆ, ಪ್ರವಾಸೋದ್ಯಮ ಹಾಗೂ ನಗರ ಅಭಿವೃದ್ಧಿಗೆ ತಿವಾರಿ ಹೆಚ್ಚಿನ ಆಸಕ್ತಿ ವಹಿಸಿದ್ದರು’ ಎಂದು ಹೇಳಿದರು.

ADVERTISEMENT

ಪತ್ರಕರ್ತ ಆನಂದ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಅಲ್ಲಾರಂಡ ಬೀನಾಬೊಳ್ಳಮ್ಮ ಅವರೂ ತಿವಾರಿ ಸೇವೆ ಸ್ಮರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಜುನ್ ಶೇನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸತ್ಯನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು.  ಜಿಲ್ಲೆಯಲ್ಲಿ 2013ರ ಆಗಸ್ಟ್ 15ರಿಂದ 2015 ಜೂನ್‌ 22ರವರೆಗೆ ಜಿಲ್ಲಾಧಿಕಾರಿಯಾಗಿ, ಜಿ.ಪಂ. ಸಿಇಒ ಆಗಿ ತಿವಾರಿ ಕರ್ತವ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.