ADVERTISEMENT

ಅಪ್ಪಾರಂಡ, ಮೂಕಳಮಾಡಕ್ಕೆ ಭರ್ಜರಿ ಗೆಲುವು

ಕುಲ್ಲೇಟಿರ ಹಾಕಿ ಟೂರ್ನಿ; ಅಪ್ಪಾರಂಡ ತಂಡದ ಜಿಪ್ಸಿ ಮಂದಣ್ಣ – ಮೂಕಳಮಾಡ ತಂಡದ ಗಣಪತಿ ಹ್ಯಾಟ್ರಿಕ್ ಗೋಲು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 12:16 IST
Last Updated 26 ಏಪ್ರಿಲ್ 2018, 12:16 IST
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಅಪ್ಪಾರಂಡ ಮತ್ತು ಬಲ್ಯಮಂಡ ತಂಡಗಳ ನಡುವೆ ನಡೆದ ಸೆಣಸಾಟದ ದೃಶ್ಯ
ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಅಪ್ಪಾರಂಡ ಮತ್ತು ಬಲ್ಯಮಂಡ ತಂಡಗಳ ನಡುವೆ ನಡೆದ ಸೆಣಸಾಟದ ದೃಶ್ಯ   

ನಾಪೊಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಬುಧವಾರದ ಪಂದ್ಯಗಳಲ್ಲಿ ಅಪ್ಪಾರಂಡ ತಂಡದ ಜಿಪ್ಸಿ ಮಂದಣ್ಣ ಮತ್ತು ಮೂಕಳಮಾಡ ತಂಡದ ಗಣಪತಿ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ತಂಡಗಳನ್ನು ಗೆಲುವಿನತ್ತ ಕೊಡೊಯ್ದರು.

ಅಂತೆಯೇ ಅಪ್ಪಾರಂಡ ಮತ್ತು ಮೂಕಳಮಾಡ ತಂಡಗಳು ಭರ್ಜರಿ ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿದವು. ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೂಕಳಮಾಡ ತಂಡವು ಮಲ್ಲಂಗಡ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತು. ಮೂರನೆಯ ಪಂದ್ಯದಲ್ಲಿ ಅಪ್ಪಾರಂಡ ತಂಡವು ಬಲ್ಯಮಂಡ ತಂಡದ ವಿರುದ್ಧ 5-0 ಅಂತರದ ಗೆಲುವು ಸಾಧಿಸಿತು. ತಂಡದ ಆಟಗಾರ ಜಿಪ್ಸಿ ಮಂದಣ್ಣ ಹ್ಯಾಟ್ರಿಕ್ ಗೋಲು ಗಳಿಸಿದರೆ ಸುಮನ್ ಎರಡು ಗೋಲು ಗಳಿಸಿದರು.

ಉಳಿದಂತೆ ಎರಡನೆಯ ಪಂದ್ಯದಲ್ಲಿ ಮುಕ್ಕಾಟಿರ (ಮಾದಾಪುರ) ತಂಡ ಕುಟ್ಟೇಟಿರ ತಂಡದ ವಿರುದ್ಧ ಸೋಲನ್ನನುಭವಿಸಿತು. ಕುಟ್ಟೇಟಿರ ತಂಡವು 3-0 ಅಂತರದ ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿತು.

ADVERTISEMENT

ಕುಟ್ಟೆಟಿರ ತಂಡದ ಸುಜು ತಿಮ್ಮಯ್ಯ, ರತನ್ ಕುಶಾಲಪ್ಪ ಹಾಗೂ ದೀಪಕ್ ಚಂಗಪ್ಪ ತಲಾ ಒಂದು ಗೊಲು ಗಳಿಸಿದರು. ಬಲ್ಯಮಂಡ ತಂಡದ ಆಟಗಾರರು ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕನೆಯ ಪಂದ್ಯದಲ್ಲಿ ಪಟ್ಟಚೆರವಂಡ ತಂಡವು ಕಂಜಿತಂಡ ತಂಡದ ವಿರುದ್ಧ 2-1 ಅಂತರದ ಗೆಲುವು ಪಡೆಯಿತು. ಪಟ್ಟಚೆರವಂಡ ತಂಡದ ಪರ ಗಗನ್ ಮತ್ತು ಆಯಿಷ್ ಗೋಲು ದಾಖಲಿಸಿದರೆ ಕಂಜಿತಂಡ ಪೂವಣ್ಣ ಒಂದು ಗೋಲು ಹೊಡೆದರು.

ಐದನೆಯ ಪಂದ್ಯದಲ್ಲಿ ಕೊಂಗೇಟಿರ ಮತ್ತು ಮೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಗೇಟಿರ ತಂಡವು ಮೇರಿಯಂಡ ತಂಡವನ್ನು 2-1 ಗೋಲಿನಿಂದ ಪರಾಭವಗೊಳಿಸಿತು. ಕೊಂಗೇಟಿರ ತಂಡದ ಪರ ಅನಿಶ್ ಉತ್ತಯ್ಯ ಎರಡು ಗೋಲು ದಾಖಲಿಸಿದರೆ, ಮೇರಿಯಂಡ ತಂಡದ ಪರ ಸುನಿಲ್ ಬೋಪಣ್ಣ ಒಂದು ಗೋಲು ದಾಖಲಿಸಿದರು. ಚೆರಿಯಪಂಡ ತಂಡದ ಗೈರು ಹಾಜರಿನಿಂದ ಬೊವ್ವೇರಿಯಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು.

ಮೈದಾನ ಒಂದರಲ್ಲಿ ನಡೆದ ಕೇಕಡ ಮತ್ತು ಚೋಯಮಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಾಡಂಡ ತಂಡವು ಕೇಕಡ ತಂಡವನ್ನು 3-0 ಗೋಲಿನಿಂದ ಸೋಲಿಸಿ ತು. ಚೋಯಮಾಡಂಡ ತಂಡದ ಪರ ಸೋಮಣ್ಣ, ಸುನ್ನು ಗಣಪತಿ, ಬಿಪಿನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು.

ಮಂಡೇಟಿರ ಮತ್ತು ಅಜ್ಜಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಟಿರ ತಂಡವು ಅಜ್ಜಮಾಡ ತಂಡವನ್ನು ಟೈ ಬ್ರೇಕರ್‌ನ 3-1 ಗೋಲಿನಿಂದ ಮಣಿಸಿತು. ಚೆಂಬಂಡ ತಂಡದ ಗೈರು ಹಾಜರಿನ ಕಾರಣದಿಂದ ತೆಕ್ಕಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟಿರ ಮತ್ತು ತೀತಿರ (ಹುದಿಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ ತೀತಿರ ತಂಡವು ಐಚೆಟ್ಟಿರ ತಂಡವನ್ನು ಟೈ ಬ್ರೇಕರ್‌ನಲ್ಲಿ 3-2 ಗೋಲಿನಿಂದ ಸೋಲಿಸಿತು.

ಮುಕ್ಕಾಟಿರ (ಭೇತ್ರಿ) ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮುಕ್ಕಾಟಿರ ತಂಡವನ್ನು 4-1 ಗೋಲಿನ ಅಂತರದಿಂದ ಮಣಿಸಿತು. ಕುಲ್ಲೇಟಿರ ತಂಡದ ಪರ ನಂದ,ಯಾಶಿಕ್, ಲೋಕೇಶ್, ಶುಭಂ ತಲಾ ಒಂದೊಂದು ಗೋಲು ದಾಖಲಿಸಿದರೆ, ಮುಕ್ಕಾಟಿರ ತಂಡದ ಪರ ಬೋಪಣ್ಣ ಒಂದು ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.