ADVERTISEMENT

‘ಇದು ರೈತರ ಪರ ಕಾಳಜಿಯಲ್ಲ’

​ಪ್ರಜಾವಾಣಿ ವಾರ್ತೆ
Published 29 ಮೇ 2018, 13:23 IST
Last Updated 29 ಮೇ 2018, 13:23 IST

ಸೋಮವಾರಪೇಟೆ: ‘ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಲು ಕ್ಷೇತ್ರದ ಶಾಸಕರು ವಿಧಾನಸೌಧದಲ್ಲಿ ರೈತರ ಪರ ಹೋರಾಡುವ ಬದಲು, ಬಲವಂತದಿಂದ ಬಂದ್ ಮಾಡುವ ಮೂಲಕ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸುವುದು ಶೋಭೆ ತರುವಂಥದಲ್ಲ’ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್ ಆರೋಪಿಸಿದರು.

ಸೋಮವಾರ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೆಲವು ದಿನಗಳು ಮಾತ್ರ ಕಳೆದಿದೆ. ಸಮ್ಮಿಶ್ರ ಸರ್ಕಾರ ಆಗಿರುವ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡುವ ವಿಷಯವನ್ನು ಮಿತ್ರಪಕ್ಷದೊಡನೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯವರು ಅನವಶ್ಯಕವಾಗಿ ಬಂದ್ ಮಾಡಿರುವ ಕ್ರಮ ಸರಿಯಲ್ಲ’ ಎಂದರು.

‘ರೈತರ ಬಗ್ಗೆ ಕಾಳಜಿ ಇರುವ ಶಾಸಕರಾಗಿದ್ದರೆ ತಾಲ್ಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ಸೋಮವಾರದ ಸಂತೆದಿನದಂದು ಬಂದ್‌ಗೆ ಕರೆ ನೀಡುತ್ತಿರಲಿಲ್ಲ. ಜಿಲ್ಲೆಯಲ್ಲಿ ರೈತರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ತಾವು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಪರಿತಪಿಸುತ್ತಿದ್ದಾರೆ. ಪಟ್ಟಣದಲ್ಲಿ ಬಂದ್ ನಡೆಸುವ ಬಗ್ಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್‌ ವರ್ತಕರಿಗೆ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ವರ್ತಕರು ಮತ್ತು ಸಾರ್ವಜನಿಕರು ಹೆಚ್ಚಿನ ತೊಂದರೆಗೆ ಸಿಲುಕುವಂತಾಯಿತು. ವರ್ತಕರ ಹಿತವನ್ನು ಕಾಪಾಡಬೇಕಾದ ಈ ಸಂಸ್ಥೆಯ ಆಡಳಿತ ಮಂಡಳಿಯ ಕೆಲವರು ಭಾರತೀಯ ಜನತಾ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಬಿಜೆಪಿ ಸರ್ಕಾರ ಇದ್ದ ಸಂದರ್ಭ ಯಡಿಯೂರಪ್ಪ, ಸಬ್ಸಿಡಿ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಸಾವಿಗೆ ಕಾರಣರಾಗಿದ್ದಾರೆ. ಇದೀಗ ರೈತರ ಪರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಈವರೆಗೆ ರೈತರಿಗೆ ಯಾವುದೇ ಸಹಾಯ ಮಾಡದ ಬಿಜೆಪಿ ಸರ್ಕಾರದ ಪ್ರಮುಖರಾಗಿ ಇದೀಗ ರೈತರ ಪರವಾಗಿ ಬಂದ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಕ್ಷದ ಜಿಲ್ಲಾ ಮಹಾ ಪ್ರಧಾನಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ ಮಾತನಾಡಿ, ‘ಬಂದ್‌ ಸಂದರ್ಭ ಪಟ್ಟಣದಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಅನವಶ್ಯಕವಾಗಿ ಘೋಷಣೆಗಳನ್ನು ಕೂಗಿ ಕೆಣಕಲು ಯತ್ನಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಪೊಲೀಸ್ ಇಲಾಖೆಯವರು ಬಿಜೆಪಿಯ ಏಜೆಂಟರಂತೆ ವರ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರು ಮತ್ತು ಅವರ ಬೆಂಬಲಿಗರ ಆಟಾಟೋಪ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಸಾರ್ವಜನಿಕರಿಗೆ ಮತ್ತು ರೈತರಿಗೆ ಯಾವುದೇ ಸಮಸ್ಯೆ ಎದುರಾದರೆ ಉಗ್ರ ಹೋರಾಟ ನಡೆಸಬೇಕಾದೀತು’ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಟಿ.ಪರಮೇಶ್, ಆರ್‌ಎಂಸಿ ಸದಸ್ಯ ನಾಗರಾಜು, ಪ್ರಮುಖರಾದ ಸಿ.ಎನ್.ಅಶ್ವಥ್, ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.