ADVERTISEMENT

ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ವಿರಾಜಪೇಟೆ: ಬಿಜೆಪಿ ಅಭ್ಯರ್ಥಿಯಾಗಿ ಕೆ.ಜಿ. ಬೋಪಯ್ಯ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:54 IST
Last Updated 25 ಏಪ್ರಿಲ್ 2018, 9:54 IST

ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಕೆ.ಜಿ.ಬೋಪಯ್ಯ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಎಂ.ಪದ್ಮಿನಿ ಪೊನ್ನಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕೆ.ಹರೀಶ್ ಬೋಪಣ್ಣ ಹಾಗೂ ಪಕ್ಷೇತರರಾಗಿ ಪಿ.ಎಸ್.ಮುತ್ತ, ಎ.ಗಿರೀಶ್ ಮತ್ತು ಫಯಾಜ್‌ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಂಗಳವಾರ ಪಟ್ಟಣದಲ್ಲಿ ಬೃಹತ್‌ ಮೆರವಣಿಗೆ ಮೂಲಕ ಸಾಗಿ ಚುನಾವಣಾಧಿಕಾರಿ ಕೆ.ರಾಜು ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್‌, ವಿಧಾನ ಪರಿಷತ್ತಿನ ಸದಸ್ಯ ಸುನಿಲ್‌ ಸುಬ್ರಮಣಿ ಇದ್ದರು.

ಬಂಡಾಯ ಅಭ್ಯರ್ಥಿ ಪದ್ಮಿನಿ ನಾಮಪತ್ರ

ADVERTISEMENT

ನಾಮಪತ್ರ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪದ್ಮಿನಿ ಪೊನ್ನಪ್ಪ, ‘ಕಳೆದ ಎರಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ನಾನು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೂ ಈ ಬಾರಿ ನನಗೆ ಅವಕಾಶ ದೊರೆಯಲಿಲ್ಲ. ಕ್ಷೇತ್ರದಲ್ಲಿ ಅನೇಕ ಜನಪರ ಕೆಲಸ ಮಾಡಿದ್ದರೂ ಹೈಕಮಾಂಡ್ ನನ್ನ ಹುಮ್ಮಸ್ಸಿಗೆ ತಣ್ಣೀರೆರಚಿದೆ. ಚುನಾವಣಾ ಕಣಕ್ಕೆ ಇಳಿದಿರುವ ನನಗೆ ಕ್ಷೇತ್ರದ ಜನ ಕೈ ಹಿಡಿಯುವ ಭರವಸೆಯಿದೆ’ ಎಂದರು.

ಪದ್ಮಿನಿ ಪನ್ನಪ್ಪ ಆಸ್ತಿ ವಿವರ: ₹ 72 ಲಕ್ಷ ಆಸ್ತಿ ಹಾಗೂ ₹ 16 ಲಕ್ಷ ಸಾಲ ಹೊಂದಿರುವುದಾಗಿ ಪದ್ಮಿನಿ ಪೊನ್ನಪ್ಪ ಘೋಷಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ‘ನನ್ನನ್ನು ಪಕ್ಷದ ವರಿಷ್ಠರಾಗಲಿ, ಮುಖ್ಯಮಂತ್ರಿಗಳಾಗಲಿ ಸೌಜನ್ಯಕ್ಕೂ ಮಾತನಾಡಿಸಿಲ್ಲ. ಮುಖ್ಯಮಂತ್ರಿ ಪ್ರಮುಖವಾಗಿ ಪೊನ್ನಂಪೇಟೆ ತಾಲ್ಲೂಕು ರಚನೆ ಹಾಗೂ ಜಿಲ್ಲೆಗೆ ₹ 50 ಕೋಟಿ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿದ್ದರೆ ನಾನು ಹಿಂದೆ ಸರಿಯುತ್ತಿದ್ದೆ. ಆದರೆ, ಇದುವರೆಗೂ ಯಾರೂ ಸಂಪರ್ಕಿಸಿಲ್ಲ’ ಎಂದರು.

ಆಸ್ತಿ ವಿವರ: ಹರೀಶ್‌ ಬೋಪಣ್ಣ ತಮ್ಮ ಆಸ್ತಿ ಮೌಲ್ಯ ₹ 20,50,45,447 ಎಂದು ಘೋಷಿಸಿಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ವಕೀಲ ಹೊದ್ದೂರಿನ ಅಚ್ಚಪಂಡ ಗಿರೀಶ್, ಪೊನ್ನಂಪೇಟೆಯ ಪಿ.ಎಸ್. ಮುತ್ತ
ಮತ್ತು ಸಿದ್ದಾಪುರ ಬಾಡಗ ಬಾಣಂಗಾಲದ ಫಯಾಜ್‌ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಬೋಪಯ್ಯ ಆಸ್ತಿ ವಿವರ

ಕೆ.ಜಿ. ಬೋಪಯ್ಯ ತಮ್ಮ ಒಟ್ಟು ಆಸ್ತಿ ಮೌಲ್ಯ ₹ 3.31 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ₹ 75 ಲಕ್ಷ ಮೌಲ್ಯದ ಕೃಷಿಭೂಮಿ, ₹ 20 ಲಕ್ಷ ಮೌಲ್ಯದ 1 ಕಾರು, ಚಿನ್ನ ಮತ್ತು ಬೆಳ್ಳಿ ಸೇರಿ ₹ 23,69,600 ಮೌಲ್ಯದ ವಸ್ತು, ಬೆಂಗಳೂರಿನಲ್ಲಿ ₹ 1.86 ಕೋಟಿ ಮೌಲ್ಯದ ಸೈಟು ಹಾಗೂ ಮಡಿಕೇರಿಯಲ್ಲಿ 40 ಸೆಂಟು ಜಾಗವಿದೆ. ಪತ್ನಿ ಹೆಸರಿನಲ್ಲಿ ₹ 50 ಸಾವಿರ ನಗದು, ವಿಜಯ ಬ್ಯಾಂಕ್‌ನಲ್ಲಿ ₹ 5 ಸಾವಿರ ಮೌಲ್ಯದ ಷೇರು, 2 ಕಾರು, ₹ 1 ಲಕ್ಷ ಮೌಲ್ಯದ ವಿಮೆ, ಜೆಪಿಎಫ್ ಖಾತೆಯಲ್ಲಿ ₹ 1.80 ಲಕ್ಷ, 500 ಗ್ರಾಂ ಚಿನ್ನಾಭರಣ ಇರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.