ADVERTISEMENT

ಕೂಲಿ ಕಾರ್ಮಿಕರಿಗೆ ಸಿಗದ ಸೂರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 8:57 IST
Last Updated 23 ಡಿಸೆಂಬರ್ 2016, 8:57 IST
ಕೂಲಿ ಕಾರ್ಮಿಕರಿಗೆ ಸಿಗದ ಸೂರು
ಕೂಲಿ ಕಾರ್ಮಿಕರಿಗೆ ಸಿಗದ ಸೂರು   

ಕುಶಾಲನಗರ: ಹನ್ನೆರಡು ವರ್ಷಗಳಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಪೈಸಾರಿ ಕಾಡಿನಲ್ಲಿ ವಾಸಿಸುತ್ತಿರುವ ಹತ್ತಾರು ಕುಟುಂಬಗಳಿಗೆ ಸೂರು ಸಿಕ್ಕಿಲ್ಲ. ಸಿದ್ದಾಪುರ ಬಳಿಯ ದಿಡ್ಡಳ್ಳಿಯಲ್ಲಿ ಒಕ್ಕಲೆಬ್ಬಿಸಿರುವಂತೆ ಅವರನ್ನೂ ಒಕ್ಕಲೆಬ್ಬಿಸಬಹುದು ಎಂಬ ಆತಂಕ ಮನೆಮಾಡಿದೆ.

ಹಲವು ವರ್ಷಗಳಿಂದ ಕಾಡಿನ ಮಧ್ಯೆ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿರುವ ಇಲ್ಲಿನ ಕುಟುಂಬಗಳು ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಬಿ.ಎಂ.ರಸ್ತೆ, ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಈ ಪೈಸಾರಿ ಕಾಡಿನಲ್ಲಿ 150 ರಿಂದ 200 ಟೆಂಟ್‌ಗಳನ್ನು ಹಾಕಲಾಗಿದೆ. ಆದರೆ ಇಲ್ಲಿ ಕೆಲವೇ ಕುಟುಂಬಗಳು ವಾಸವಾಗಿವೆ.

ವಿದ್ಯುತ್ , ಸೂಕ್ತ ರಸ್ತೆ ಸಂಪರ್ಕವೂ ಇಲ್ಲ. ಕಾಡಾನೆ ಹಾವಳಿ ಇದ್ದು, ಜೀವ ಭಯದಿಂದಲೇ ದಿನ ಕಳೆಯಬೇಕಾದ ಪರಿಸ್ಥಿತಿ ಇಲ್ಲಿನ ನಿವಾಸಿಗಳಾದ್ದಾಗಿದೆ.
ರಾತ್ರಿ ವೇಳೆ ಗುಡಿಸಲ ಬಳಿ ಕಾಡಾನೆಗಳು ಬರುತ್ತವೆ. ಆಗ ಜೋರಾಗಿ ಕಿರುಚಾಡಿ ಅವುಗಳನ್ನು ಓಡಿಸುತ್ತೇವೆ ಎನ್ನುವ ಇಲ್ಲಿನ ನಿವಾಸಿ ಕಾವೇರಮ್ಮ, ಆಶ್ರಯ ಮನೆಗಾಗಿ ಕಚೇರಿಗಳಿಗೆ ಅಲೆದಾಡಿ ಹೋರಾಟ ನಡೆಸಿದ್ದೇನೆ. ಆದರೆ ಮನೆ ಕನಸಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭ ಮತಯಾಚಿಸಿ ಬರುವ ಜನಪ್ರತಿನಿಧಿಗಳು ಬಳಿಕ ಈ ಕಡೆ ಬರುವುದೇ ಇಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸುವುದೂ ಇಲ್ಲ ಎಂದು ನಿವಾಸಿ ಮೇರಿ ಆಕ್ರೋಶ ವ್ಯಕ್ತಪಡಿಸಿದರು.

‘ಪತಿ ಜಾನ್ ಅಂಗವಿಕಲ. ನಾನು ಕೂಲಿ ಮಾಡಿ ಪತಿ ಮತ್ತು ಮಕ್ಕಳನ್ನು ಸಾಕಬೇಕು. ಆಶ್ರಯ ಮನೆ ನೀಡುವಂತೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೇನೆ. ಶಾಶ್ವತವಾದ ನೆಲೆ ಸಿಗುತ್ತದೆ ಎನ್ನುವ ವಿಶ್ವಾಸದಿಂದ ದಿನ ಕಳೆಯುತ್ತಿದ್ದೇವೆ’ ಎಂದು ಮೇರಿ ಅಳಲು ತೋಡಿಕೊಂಡರು.

ಬಸವನಹಳ್ಳಿ ಪೈಸಾರಿ ಕಾಡಿನ ಸರ್ವೆ ನಂಬರ್ 1/1 ರಲ್ಲಿ 4 ಎಕರೆಯನ್ನು ಕೆಎಸ್ಆರ್‌ಟಿಸಿ ಬಸ್ ಡಿಪೋಗೆ ಕಾಯ್ದಿರಿಸಲಾಗಿದೆ. ಉಳಿದ 3 ಎಕರೆ ಜಾಗದಲ್ಲಿ ನವ ಗ್ರಾಮ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಸರ್ವೆ ಕಾರ್ಯ ನಡೆಸಿ ಜಾಗವನ್ನು   ಸಮತಟ್ಟುಗೊಳಿಸಿ ಈ ಜಾಗದಲ್ಲಿ 51 ಮಂದಿಗೆ ಹಕ್ಕುಪತ್ರದೊಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಗುಡ್ಡೆಹೊಸೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.