ADVERTISEMENT

ಗುಡಿಸಲು ನಿರ್ಮಾಣ: ಸಂಘರ್ಷದ ವಾತಾವರಣ

ನಿವೇಶನಕ್ಕಾಗಿ ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆ; ಮುಂಜಾಗ್ರತೆಗೆ ಪೊಲೀಸ್ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:39 IST
Last Updated 4 ಮೇ 2017, 7:39 IST

ಸಿದ್ದಾಪುರ: ನಿವೇಶನಕ್ಕಾಗಿ ಧರಣಿ ನಡೆಸುತ್ತಿದ್ದ ದಿಡ್ಡಳ್ಳಿ ಹಾಡಿಯ ಗಿರಿಜನರು ಅರಣ್ಯ ಇಲಾಖೆಗೆ ಸೇರಿದ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಗುಡಿಸಲು ಮತ್ತು ಜೋಪಡಿಗಳನ್ನು ನಿರ್ಮಿಸಿದ್ದು, ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

ಸುಮಾರು ನೂರಕ್ಕಿಂತ ಹೆಚ್ಚು ಆದಿವಾಸಿ ಕುಟುಂಬಗಳು ಬುಧವಾರ ಮುಂಜಾನೆ ನಿವೇಶನಕ್ಕಾಗಿ ಧರಣಿ ನಡೆಸುತ್ತಿದ್ದ ಪ್ರದೇಶದ ಪಕ್ಕದಲ್ಲಿರುವ ಅರಣ್ಯ ಪ್ರದೇಶ ಪ್ರವೇಶಿಸಿ ಗುಡಿಸಲುಗಳನ್ನು ನಿರ್ಮಿಸಿದರು.

ಜಿಲ್ಲಾಡಳಿತ, ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಮತ್ತು ಪೊಲೀಸ್ ಇಲಾಖೆ ದಿಡ್ಡಳ್ಳಿಗೆ ದೌಡಾಯಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ತುಕಡಿಗಳನ್ನು ನಿಯೋಜಿಸಿದೆ.

ಸ್ಥಳಕ್ಕೆ ಮಡಿಕೇರಿ ಡಿವೈಎಸ್‌ಪಿ ಎಸ್.ಬಿ.ಛಬ್ಭಿ, ಸಿದ್ದಾಪುರ ಠಾಣಾಧಿಕಾರಿ ಜಿ.ಕೆ.ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಕಂದಾಯ ಅಧಿಕಾರಿ ಶ್ರೀನಿವಾಸ್, ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ಮಾಡಿ ಪರಿಶೀಲನೆ ನಡೆಸಿದರು.

ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶ ಎಂದು ಹೇಳಲಾದ ಸ್ಥಳದಲ್ಲಿದ್ದ 577 ಕುಟುಂಬಗಳ ಗುಡಿಸಲುಗಳನ್ನು ಅರಣ್ಯ ಇಲಾಖೆ ಈಚೆಗೆ ತೆರವುಗೊಳಿಸಿತು. ಗಿರಿಜನರು ಸಮೀಪದ ಆಶ್ರಮ ಶಾಲೆಯ ಮೈದಾನದಲ್ಲಿ ನಾಲ್ಕು ತಿಂಗಳಿಂದ ಧರಣಿ ನಡೆಸುತ್ತಿದ್ದರು.

ಜಿಲ್ಲಾಡಳಿತ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಸಮೀಪದ ಬಸವನಹಳ್ಳಿ ಮತ್ತು ವಿರಾಜಪೇಟೆ ತಾಲೂಕಿನ ಕೆದಮುಳ್ಳುರಿನಲ್ಲಿ ಆದಿವಾಸಿಗಳಿಗೆ ನೀಡಲು ನಿವೇಶನವನ್ನು ಗೊತ್ತುಪಡಿಸಿತು. ಕೆಲ ಗಿರಿಜನರು ಜಿಲ್ಲಾಡಳಿತ ಗುರುತಿಸಿದ ಸ್ಥಳಕ್ಕೆ ಹೋಗಲು ತೀರ್ಮಾನಿಸಿ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದ್ದರು.

ಉಳಿದ ಗಿರಿಜನರು ದಿಡ್ಡಳ್ಳಿಯಲ್ಲಿಯೇ ನಿವೇಶನಬೇಕೆಂದು ಪಟ್ಟು ಹಿಡಿದು ಒತ್ತಾಯಿಸಿದ್ದರು. ಇದರ ಪರಿಣಾಮ ಅತಿಕ್ರಮ ಪ್ರವೇಶ ಮಾಡಿರುವ ಗಿರಿಜನರನ್ನು ತೆರವುಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಅಕ್ರಮ ಪ್ರವೇಶ ಮಾಡಿ ಗುಡಿಸಲು ನಿರ್ಮಿಸಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐವರ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ: 
ಆದಿವಾಸಿ ಮುಖಂಡರಾದ ಜೆ.ಕೆ. ಅಪ್ಪಾಜಿ, ಜೆ.ಕೆ. ಮುತ್ತಮ್ಮ, ಮಲ್ಲ, ಮುತ್ತ ಹಾಗೂ ಅಪ್ಪು ಎಂಬುವರ ವಿರುದ್ಧ ಅಕ್ರಮ ಪ್ರವೇಶ, ಜೀವ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಫಲಗೊಂಡ ಮನವೊಲಿಕೆ: ಆದಿವಾಸಿಗಳು ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿದ್ದು, ಸ್ಥಳಕ್ಕೆ ಬಂದ ಡಿವೈಎಸ್‌ಪಿ ಛಬ್ಬಿ ಆದಿವಾಸಿಗಳ ಮನವೊಲಿಕೆಗೆ ಪ್ರಯತ್ನಿಸಿದರು. ‘ಆದಿವಾಸಿಗಳ ಸಮ್ಮುಖದಲ್ಲೇ ಚರ್ಚೆಮಾಡಿ; ನಾವು ಯಾವುದೇ ಸಂಧಾನಕ್ಕೂ ಬರುವುದಿಲ್ಲ’ ಎಂದು ಮುತ್ತಮ್ಮ ಎಚ್ಚರಿಸಿದರು.

ಪೊಲೀಸ್ ಬಂದೋಬಸ್ತ್:  ದಿಡ್ಡಳ್ಳಿ ಮೀಸಲು ಅರಣ್ಯದಲ್ಲಿ ಗುಡಿಸಲು ನಿರ್ಮಿಸಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು. ಕೆಎಸ್ಆರ್‌ಪಿ, ಡಿಎಆರ್ ಸೇರಿದಂತೆ ಒಟ್ಟು 80 ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ  ಒಟ್ಟು 40 ಸಿಬ್ಬಂದಿ ದಿಡ್ಡಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ.

ಹೋರಾಟ ಸಮಿತಿಯ ಅಗತ್ಯವಿಲ್ಲ:  ಈ ಮಧ್ಯೆ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ನೀಡಿದ್ದ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ವಿರುದ್ಧ ಆದಿವಾಸಿ ಮುಖಂಡರು ಕಿಡಿಕಾರಿದ್ದಾರೆ.

‘ಸಮಿತಿಯ ಸಿರಿಮನೆ ನಾಗರಾಜ್, ಎ.ಕೆ. ಸುಬ್ಬಯ್ಯ, ನಿರ್ವಾಣಪ್ಪ, ಅಮೀನ್ ಮೊಹಿಸಿನ್ ಸೇರಿದಂತೆ ಪ್ರಮುಖರು ಆದಿವಾಸಿಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಸಮಿತಿಯ ಪ್ರಮುಖರ ದಿಡ್ಡಳ್ಳಿಗೆ ಬರಕೂಡದು; ಸಮಿತಿಯ ಬೆಂಬಲದ ಅಗತ್ಯವಿಲ್ಲ’ ಎಂದು ನಿರಾಶ್ರಿತರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.