ADVERTISEMENT

ಗ್ರಾಮ, ಹೋಬಳಿಗಳಲ್ಲಿ ವಿಶೇಷ ಶಿಬಿರ

ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:50 IST
Last Updated 5 ಮೇ 2017, 8:50 IST

ಮಡಿಕೇರಿ:  ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದವರು ಆಧಾರ್ ಕಾರ್ಡ್, ರಾಷ್ಟ್ರೀಯ ಉದ್ಯೋಗ ಖಾತ್ರಿ ಅಡಿ ಜಾಬ್ ಕಾರ್ಡ್, ಬ್ಯಾಂಕ್ ಖಾತೆ ತೆರೆಯುವುದು ಹಾಗೂ ವಿವಿಧ ಪ್ರಮಾಣ ಪತ್ರ ಪಡೆಯಲು ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ವಿಶೇಷ ಶಿಬಿರ ಆಯೋಜಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಲ್ಯಾಣ ಕಾರ್ಯಕ್ರಮಗಳು ಬಡವರಿಗೆ ತಲುಪಬೇಕು. ಅರ್ಹರನ್ನು ಗುರುತಿಸಿ ಸೌಲಭ್ಯ ನೀಡಬೇಕು. ವಿಶೇಷ ಶಿಬಿರ ಆಯೋಜನೆಗೆ ಸಮಾಜ ಕಲ್ಯಾಣ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಪ್ರಯತ್ನಿಸಬೇಕು’ ಎಂದು ಸೂಚಿಸಿದರು.

ಯೋಜನೆಗಳ ಪ್ರಗತಿ ಸಂಬಂಧ ಚರ್ಚಿಸಲು ಪ್ರತಿ ತಿಂಗಳ ಮೂರನೇ ವಾರದ ಸಭೆ ನಡೆಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಬ್ಯಾಂಕ್‌ ಅಧಿಕಾರಿಗಳ ಸಭೆಗೆ ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಚಾರುಲತಾ ಸೋಮಲ್‌, ‘ಪರಿಶಿಷ್ಟರಿಗೆ ಮೀಸಲಿಟ್ಟಿರುವ ಅನುದಾನವು ಅದೇ ಸಮುದಾಯದ ಅರ್ಹರಿಗೆ ತಲುಪಿಸಬೇಕು’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಮ್ತಾಜ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ರಾಜ್‌ಕುಮಾರ್ ರೆಡ್ಡಿ, ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕ ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.