ADVERTISEMENT

ಜಯದ ನಿರೀಕ್ಷೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರು

ಅದಿತ್ಯ ಕೆ.ಎ.
Published 11 ಏಪ್ರಿಲ್ 2017, 9:07 IST
Last Updated 11 ಏಪ್ರಿಲ್ 2017, 9:07 IST
ಜಯದ ನಿರೀಕ್ಷೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರು
ಜಯದ ನಿರೀಕ್ಷೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರು   

ಮಡಿಕೇರಿ: ರಾಷ್ಟ್ರದ ಗಮನ ಸೆಳೆದಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ದಿಡ್ಡಳ್ಳಿಯ ಆದಿವಾಸಿಗಳ ಹೋರಾಟವು ಅಂತಿಮ ಘಟ್ಟಕ್ಕೆ ತಲುಪಿದ್ದು, ಬೆಂಗಳೂರಿನಲ್ಲಿ ಮಂಗಳವಾರ ಮಹತ್ವದ ಸಭೆ ನಡೆಯಲಿದೆ.ವಿಧಾನಸೌಧದ ಮೂರನೇ ಮಹಡಿ ಕೊಠಡಿ ಸಂಖ್ಯೆ 332ರ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಭೆಯು ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದು, ಸಭೆಗೆ ದಿಡ್ಡಳ್ಳಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಮುಖಂಡರ ದಂಡು ತೆರಳಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಸಚಿವ ರಮಾನಾಥ್‌ ರೈ, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಕೊಡಗು ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನೂ ದಿಡ್ಡಳ್ಳಿಗೆ ಆದಿವಾಸಿ ಜನರಿಗೆ ನ್ಯಾಯ ಕೊಡಿಸಿಯೇ ತೀರುತ್ತೇವೆ ಎಂದು ಹೋರಾಟಕ್ಕೆ ಧುಮುಕಿದ್ದ ಮುಖಂಡರ ತಂಡವು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ವಕೀಲ ಎ.ಕೆ. ಸುಬ್ಬಯ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಿ.ಎಸ್‌. ನಿರ್ವಾಣಪ್ಪ, ಮಡಿಕೇರಿ ನಗರಸಭೆ ಸದಸ್ಯ ಅಮಿನ್‌ ಮೊಹಿಸಿನ್‌, ಪತ್ರಕರ್ತೆ ಗೌರಿ ಲಂಕೇಶ್, ಹೋರಾಟಗಾರರಾದ ಸಿರಿಮನೆ ನಾಗರಾಜ್‌, ನೂರ್‌ ಶ್ರೀಧರ್‌, ಆದಿವಾಸಿ ಮುಖಂಡರಾದ ಅಪ್ಪಾಜಿ, ಮುತ್ತಮ್ಮ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ADVERTISEMENT

ಏನಿದು ಹೋರಾಟ?:  ಅದು ಡಿಸೆಂಬರ್‌ 7ರ ಮುಂಜಾನೆ. ದಿಡ್ಡಳ್ಳಿ ಆಶ್ರಮ ಶಾಲೆಯ ಪಕ್ಕದ ಆರಣ್ಯ ಪ್ರದೇಶದಲ್ಲಿ ಎದಿನಂತೆಯೇ ಕಾಡು ಜನರು ಕೂಲಿ ಕೆಲಸ ಮುಗಿಸಿ ಮುಂಜಾನೆಯ ನಿದ್ರೆಯಲ್ಲಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯ ಪ್ರದೇಶದ ಒತ್ತುವರಿ ತೆರವು ಆರೋಪದ ಮೇರೆಗೆ 588 ಗುಡಿಸಲುಗಳನ್ನು ಜೆಸಿಬಿಯೊಂದಿಗೆ ತೆರವು ಮಾಡಿದ್ದರು. ಇದನ್ನು ಖಂಡಿಸಿ ಆದಿವಾಸಿ ಮಹಿಳೆ ಹಾಗೂ ಪುರುಷರೊಬ್ಬರು ಬೆತ್ತಲೆ ಪ್ರತಿಭಟನೆ ನಡೆಸಿದ್ದರು. ತೆರವು ಬಳಿಕ ಪೊಲೀಸರು ಅನುಚಿತ ವರ್ತನೆ ಆರೋಪದ ಮೇರೆಗೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

‘ಇದು ಅರಣ್ಯ ಜಾಗವಲ್ಲ; ನಾವು ಹಲವು ವರ್ಷಗಳಿಂದ ಇದೇ ಜಾಗದಲ್ಲಿ ನೆಲೆಸಿದ್ದೆವು. ಇದು ಪೈಸಾರಿ ಜಾಗವಾಗಿದ್ದು, ಈ ಪ್ರದೇಶದಲ್ಲಿ ವಾಸ ಮಾಡಲು ನಮಗೆ ಹಕ್ಕಿದೆ’ ಎಂದು ಆದಿವಾಸಿಗಳು ಪ್ರತಿಭಟನೆ ಆರಂಭಿಸಿದ್ದರು. ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ ಸಾಗಿತು. ಹೋರಾಟದ ನಾಲ್ಕನೇ ದಿವಸ ಬೆತ್ತಲೆ ಪ್ರತಿಭಟನೆ ನಡೆಸಿ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಹೋರಾಟ ಮತ್ತಷ್ಟು ಕಾವು ಪಡೆಯಿತು. ಪುನರ್ವಸತಿಯ ಹೋರಾಟಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿದವು.

ಜಕೀಯ ಮುಖಂಡರೂ ಸ್ಥಳಕ್ಕೆ ಭೇಟಿ ನೀಡಿ ಪುನರ್ವಸತಿಗೆ ಆಗ್ರಹಿಸಿದ್ದರು. ಆದರೆ, ಜಿಲ್ಲಾಡಳಿತ ಮಾತ್ರ ಅರಣ್ಯ ಪ್ರದೇಶವಾಗಿದ್ದು, ಅಲ್ಲಿ ಪುನರ್ವಸತಿ ಸಾಧ್ಯವೇ ಇಲ್ಲವೆಂದು ಪಟ್ಟು ಹಿಡಿದಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿತ್ತು.

ಅರಣ್ಯ ಇಲಾಖೆ ನಾಗರಹೊಳೆ ವ್ಯಾಪ್ತಿಗೆ ಬರುವ ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶವು ಸುರಕ್ಷಿತಾ ವಲಯದಲ್ಲಿದೆ ಎಂದು ಪಟ್ಟು ಹಿಡಿಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಸಂಧಾನ ಸಭೆ ನಡೆಸಿದ್ದರೂ ವಿಫಲವಾಗಿತ್ತು.  ಡಿಸೆಂಬರ್‌ ಕೊನೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಸಂಧಾನ ಸಭೆ ನಡೆಸಿ, ತಾತ್ಕಾಲಿಕ ಪರಿಹಾರಕ್ಕೆ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಈ ಅನುದಾನದಲ್ಲಿ ನಿವೇಶನ ಹುಡುಕುವ ತನಕ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿತ್ತು. ಜನವರಿಯಲ್ಲಿ ಜಿಲ್ಲಾಡಳಿತ ರಾಂಪುರ, ಕೆದಮಳ್ಳೂರು, ಬಸವನಹಳ್ಳಿಯಲ್ಲಿ ನಿವೇಶನ ಗುರುತಿಸಿ, ಅರ್ಹ 528 ಮಂದಿಗೆ ನಿವೇಶನ ಹಂಚಿಕೆ ಮಾಡಿತ್ತು. ಆದರೆ, ದಿಡ್ಡಳ್ಳಿಯಲ್ಲೇ ನಿವೇಶನ ನೀಡುವಂತೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಯಾರೂ ಆ ಸ್ಥಳಗಳಿಗೆ ತೆರಳಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.