ADVERTISEMENT

ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನಕ್ಕೆ ವಿರೋಧ

ಮೊದಲು ಬಸವನಹಳ್ಳಿ ಮೂಲನಿವಾಸಿಗಳಿಗೆ ಸೌಲಭ್ಯ ಕಲ್ಪಸಿ– ಕೃಷಿಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:53 IST
Last Updated 17 ಏಪ್ರಿಲ್ 2017, 6:53 IST
ಕುಶಾಲನಗರ: ದಿಡ್ಡಳ್ಳಿ ನಿರಾಶ್ರಿತರಿಗೆ ಬಸವನಹಳ್ಳಿಯಲ್ಲಿ ನಿವೇಶನ ಒದಗಿಸಲು ನಮ್ಮ ವಿರೋಧವಿದೆ  ಎಂದು ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಹೇಳಿದರು.
 
ಸೋಮವಾರಪೇಟೆ ತಾಲ್ಲೂಕಿ ನಲ್ಲಿಯೇ ಅಸಂಖ್ಯ ಗಿರಿಜನ ಕುಟುಂಬ ಗಳಿಗೆ ಸೂರು ಇಲ್ಲದೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೊದಲು ಈ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
 
ಬಸವನಹಳ್ಳಿ ಸೇರಿ ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ನಿವೇಶನ ಕಲ್ಪಿಸಲು ಜಿಲ್ಲೆಯ 5 ಕಡೆಗಳಲ್ಲಿ ಸರ್ಕಾರ ಹೊಸ ಬಡಾವಣೆ ಅಭಿವೃದ್ಧಿಪಡಿಸುತ್ತರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಭಾನುವಾರ ಭೇಟಿ ನೀಡಿದ್ದ ಕಂದಾಯ ಸಚಿವ ಕಗೋಡು ತಿಮ್ಮಪ್ಪ ಅವರ ಎದುರು ಈ  ಮನವಿ ಮಾಡಿದರು. 
 
ಸ್ಥಳೀಯರ ವಿರೋಧದ ನಡುವೆಯೂ ದಿಡ್ಡಳ್ಳಿ ಜನರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ಮುಂದಾದರೆ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. 
 
ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ–ವಿಭಾಗಾಧಿಕಾರಿ ನಂಜುಂಡೇಗೌಡ, ಐಟಿಡಿಪಿ ಅಧಿಕಾರಿ ಪ್ರಕಾಶ್‌, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್.ಪುಷ್ಪಲತಾ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಗುಡ್ಡೆಹೊಸೂರು ಗ್ರಾ.ಪಂ.ಅಧ್ಯಕ್ಷೆ ಭಾರತಿ, ಮುಖಂಡರಾದ ಗೋವಿಂದಪ್ಪ, ಪ್ರಕಾಶ್ ಇದ್ದರು.
 
ವಸತಿ ರಹಿತರಿಗೆ ನಿವೇಶಕ್ಕೆ ಮನವಿ: ಗುಡ್ಡೆಹೊಸೂರು ಗ್ರಾ.ಪಂ.ವ್ಯಾಪ್ತಿಯ ವಸತಿರಹಿತ ಕುಟುಂಬಗಳಿಗೆ ಬಸವನಹಳ್ಳಿಯಲ್ಲಿ ನಿವೇಶನ ಕಲ್ಪಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷೆ ಭಾರತಿ ಮನವಿ ಮಾಡಿದರು.
 
‘ವಸತಿ ರಹಿತರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ  ಸಲ್ಲಿಸಿದ್ದೇವೆ. ಇದುವರೆಗೂ ಕ್ರಮ ಕೈಗೊಂಡಿಲ್ಲ. ಅಲ್ಲದೆ ಇದ್ದಕಿದ್ದಂತೆ ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನ ಕೊಡಲು ಮುಂದಾಗಿರುವ ಕ್ರಮದ ಬಗ್ಗೆ ಸಚಿವರನ್ನು ಪ್ರಶ್ನಿಸಿದರು. 
 
ಸಚಿವ ಕಾಗೂಡು ತಿಮ್ಮಪ್ಪ ಪ್ರತಿಕ್ರಿಯಿಸಿ ಯಾರಿಗೂ ಅನ್ಯಾಯವಾಗದಂತೆ ನಿವೇಶನ ಹಂಚಿಕೆಯಾಗಲಿದೆ. ಈ ಬಗ್ಗೆ ಗೊಂದಲ ಬೇಡ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.