ADVERTISEMENT

ಧಾರಾಕಾರ ಮಳೆ, ಉಕ್ಕಿ ಹರಿದ ಕೀರೆಹೊಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:41 IST
Last Updated 19 ಸೆಪ್ಟೆಂಬರ್ 2017, 6:41 IST

ಗೋಣಿಕೊಪ್ಪಲು: ರಭಸದ ಗಾಳಿಯೊಂದಿಗೆ ಆರಂಭಗೊಂಡ ಮಳೆ ಗೋಣಿಕೊಪ್ಪಲು ಸುತ್ತಮುತ್ತ ಧಾರಾಕಾರವಾಗಿ ಸುರಿಯಿತು. ಮಳೆಗೆ ಹಳ್ಳಕೊಳ್ಳಗಳು ತುಂಬಿದವು. ಕೀರೆಹೊಳೆ ಮೈದುಂಬಿದರೆ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯಿತು. ಭಾನುವಾರ ನಿರಂತರವಾಗಿ ಬಿದ್ದ ಮಳೆಗೆ ತೊರೆತೋಡುಗಳು ತುಂಬಿದ್ದವು.

ಸೋಮವಾರ ಮತ್ತೆ ರಭಸವಾಗಿ ಬಿದ್ದ ಮಳೆಗೆ ಹಳ್ಳಕೊಳ್ಳಗಳ ನೀರಿನ ಹರಿವು ಮತ್ತಷ್ಟು ಹೆಚ್ಚಾಯಿತು. ಕೆಲವು ಕಡೆ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ಅಡಚಣೆಯಾಗಿತ್ತು.
ಮಳೆ, ಸಂಚಾರ ಅವ್ಯವಸ್ಥೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೋವಿಂದರಾಜು. ಸೋಮವಾರ ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದರು.
ತಿತಿಮತಿ ಸಮೀಪದ ಮಾವಕಲ್ ಅರಣ್ಯದ ಆನೆ ಕಂದಕಗಳಳಲ್ಲಿ ನೀರು ತುಂಬಿ ಹಾಡಿಗಳ ಗುಡಿಸಿಲಿನೊಳಗೆ ಹರಿಯಿತು.

ದೇವಮಚ್ಚಿ, ರೇಷ್ಮೆಹಡ್ಲು ಗಿರಿಜನ ಹಾಡಿಯ ಮನೆಗಳಿಗೆ ಅರಣ್ಯದಂಚಿನ ಕಂದಕಗಳ ನೀರು ಏರಿ ಒಡೆದು ಹಾಡಿ ರಸ್ತೆ ಮೇಲೆ ಹರಿಯಿತು. ಇದರಿಂದ ಹಾಡಿಯಲ್ಲಿರುವ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಯಿತು. ಶಾಲೆಗಳಿಗೆ ರಜೆ ಘೋಷಣೆಯಾದುದರಿಂದ ಹೆಚ್ಚಿನ ಸಮಸ್ಯೆ ಉಂಟಾಗಲಿಲ್ಲ. ಆದರೆ ಅಂಗನವಾಡಿ ಹಾಗೂ ಹಾಡಿಗಳ ಅನೇಕ ಮನೆಗಳಿಗೆ ನೀರು ನುಗ್ಗಿ ಆತಂಕ ಉಂಟುಮಾಡಿತು.

ADVERTISEMENT

ತಿತಿಮತಿ ವಲಯ ಅರಣ್ಯಾ ಧಿಕಾರಿ ಅಶೋಕ್ ಹುನುಗುಂದ ಸಿಬ್ಬಂದಿ, ನೀರು ತಡೆಗೆ ಕ್ರಮಕೈಗೊಂಡರು. ಅಮ್ಮತ್ತಿ, ಗೋಣಿಕೊಪ್ಪಲು ಕಿರುಗೂರು ಮಾರ್ಗವಾಗಿ ಹರಿಯುವ ಕೀರೆಹೊಳೆ ವೈಭಯ ಕಣ್ಮನ ತಣಿಸಿತು. ಸೋಮವಾರದ ಮಳೆಗೆ ನದಿಯಲ್ಲಿ ಯಥೇಚ್ಚ ನೀರು ಹರಿಯಿತು.

ಬೇಗೂರು, ಪೊನ್ನಂಪೇಟೆ ನಡುವಿನ ಕೊಲ್ಲಿಯಲ್ಲಿ ನೀರು ಸಮುದ್ರದಂತೆ ತುಂಬಿತ್ತು. ಆದರೆ ಗದ್ದೆಗಳಲ್ಲಿ ಭತ್ತದ ಬೆಳೆ ಇರುವುದರಿಂದ ನೀರು ಹೆಚ್ಚಾಗಿ ಕಂಡು ಬರಲಿಲ್ಲ.
ಕಿರುಗೂರು ಬಳಿ ನದಿಗೆ ಅಡ್ಡವಾಗಿ ನಿರ್ನಿಸಿರುವ ಸೇತುವೆ ಕೆಳಗಿನ ದೃಶ್ಯ ಮನಮೋಹಕವಾಗಿತ್ತು. ಕೃಷಿ ಭೂಮಿಗೆ ನೀರೊದಗಿಸಲು ನಿರ್ಮಿಸಿರುವ ಪಿಕಪ್‌ ನಿಂದ ಧುಮ್ಮಿಕ್ಕುತ್ತಿದ್ದ ನೀರಿನ ರಭಸಕ್ಕೆ ಸೇತುವೆಯೇ ಅದುರುತ್ತಿತ್ತು.

ಹುದಿಕೇರಿ, ಶ್ರೀಮಂಗಲ,ಬಿ.ಶೆಟ್ಟಿಗೇರಿ, ಕುಂದ ಕಡೆಯೂ ಉತ್ತಮ ಮಳೆಯಾಗಿದೆ. ತೊರೆ ತೋಡುಗಳಲ್ಲಿ ಜೀವ ಕಳೆ ತುಂಬಿತ್ತು. ಸೋಮವಾರ ಬೆಳಿಗ್ಗೆ ಮಳೆ ತುಸು ಕುಗ್ಗಿತು. ಮಳೆ ಭತ್ತ ಕೃಷಿಗೆ ಸಹಕಾರಿಯಾದರೆ ಕಾಫಿಗೆ ಅಪಾಯ ತಂದಿತು. ಕಾಫಿ ಉದುರುವ ಆತಂಕ ಬೆಳೆಗಾರರಿಗೆ ಕಾಡಿತು.

ಸಂಜೆ ಗಾಳಿಗೆ ಗೋಣಿಕೊಪ್ಪಲು ಪಟ್ಟಣದ ಕೆಲವು ಅಂಗಡಿ ಮುಂಗಟ್ಟು ನಾಮಫಲಕ ಕೆಳಕ್ಕುರಿಳಿದವು. ತಿತಿಮತಿ, ಪೊನ್ನಂಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಹುದಿಕೇರಿ ಸೇರಿ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಭಾನುವಾರ ಸಂಜೆಯಿಂದ ಕತ್ತಲಲ್ಲಿ ಮುಳುಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.