ADVERTISEMENT

ನಾಪೋಕ್ಲು: ಅಭಿವೃದ್ಧಿಯ ನಿರೀಕ್ಷೆಗಳ ಸುತ್ತ

ಬೇಕಿದೆ ಸುಸಜ್ಜಿತ ಬಸ್ಸು ನಿಲ್ದಾಣ: ಸುಧಾರಿಸಬೇಕಿದೆ ಆರೋಗ್ಯ ಕೇಂದ್ರ: ವಿದ್ಯುತ್ ಪೂರೈಕೆಗೂ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 12:15 IST
Last Updated 5 ಜೂನ್ 2018, 12:15 IST
ನಾಪೋಕ್ಲು ಪಟ್ಟಣದಲ್ಲಿ ವಾಹನಗಳ ದಟ್ಟಣೆ
ನಾಪೋಕ್ಲು ಪಟ್ಟಣದಲ್ಲಿ ವಾಹನಗಳ ದಟ್ಟಣೆ   

ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ಎರಡನೇ ಮುಖ್ಯ ಪಟ್ಟಣವಾಗಿರುವ ನಾಪೋಕ್ಲು ಪಟ್ಟಣದ ಜನರ ನಿರೀಕ್ಷೆಗಳು ಹತ್ತಾರು. ಮುಖ್ಯವಾಗಿ ಪಟ್ಟಣಕ್ಕೆ ಬಸ್ ನಿಲ್ದಾಣವೇ ಇಲ್ಲ. ಇನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರತೆಗಳೇ ಅಧಿಕ. ವಿದ್ಯುತ್ ಸರಬರಾಜಿಗೂ ತೊಡಕು. ಸಮೀಪದ ಕೊಟ್ಟಮುಡಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ನೀರು ಕಲುಷಿತಗೊಳ್ಳದಂತೆ ತುರ್ತಾಗಿ ಯೋಜನೆಯನ್ನೂ ಹಮ್ಮಿಕೊಳ್ಳಬೇಕಿದೆ. ಹೀಗೆ ಒಂದಲ್ಲ, ಎರಡಲ್ಲ, ಹತ್ತಾರು ನಿರೀಕ್ಷೆಗಳು ಇಲ್ಲಿನ ನಾಗರಿಕರದ್ದು. ಅಭಿವೃದ್ಧಿ ಕುರಿತಂತೆ ಶಾಸಕರ ಎದುರು ತೋಡಿಕೊಳ್ಳಲು ಸಮಸ್ಯೆಗಳ ಸರಮಾಲೆಯೇ ಇದೆ.

ಬಸ್ ನಿಲ್ದಾಣ ಬೇಕೆಂಬ ಇಲ್ಲಿನ ಜನರ ಬೇಡಿಕೆ ಬೇಡಿಕೆ ಯಾಗಿಯೇ ಉಳಿದಿದೆ. ನಾಲ್ಕಾರು ಬಸ್‌ಗಳು ಏಕ ಕಾಲದಲ್ಲಿ ಬಂದರೆ ನಿಲುಗಡೆಯ ಮಾತಿರಲಿ, ಜನರು ನಡೆದಾಡಲೂ ಸ್ಥಳವಿರುವುದಿಲ್ಲ.

ಶಾಲಾ ಕಾಲೇಜುಗಳು ಆರಂಭ ವಾಗುವ ಮತ್ತು ಮುಗಿಯುವ ಅವಧಿಯಲ್ಲಿ ಜೊತೆಗೆ ಸಂತೆಯ ದಿನವಾದ ಸೋಮವಾರ ವಾಹನಗಳ ದಟ್ಟಣೆಯಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆಗಳು ಹತ್ತು ಹಲವು. ಇಲ್ಲಿನ ಹರದಾಸ ಅಪ್ಪಚ್ಚಕವಿ ರಸ್ತೆಯನ್ನು ವಿಸ್ತರಿಸಿದ್ದರೂ ಆಟೊ, ಖಾಸಗಿ ವಾಹನಗಳ ದಟ್ಟಣೆ ಅಧಿಕವಾಗಿ ನಿಲುಗಡೆಯ ಸಮಸ್ಯೆ ಎದುರಾಗಿದೆ. ನಗರದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸುಮಾರು 200 ಆಟೊಗಳು, ನೂರಕ್ಕೂ ಅಧಿಕ ಜೀಪುಗಳು, ಬಾಡಿಗೆ ವಾಹನಗಳು ಮತ್ತು ನಗರಕ್ಕೆ ಬರುತ್ತಿರುವ ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ನಿಲುಗಡೆಯ ಸಮಸ್ಯೆ ಎದುರಿಸುತ್ತಿವೆ.

ADVERTISEMENT

ನಿಲ್ದಾಣವೇ ಸಮಸ್ಯೆ

ಅಧಿಕ ವಾಹನಗಳು ಹಾಗೂ ಪಟ್ಟಣಗಳ ರಸ್ತೆಗಳು ಕಿರಿದಾಗಿರುವುದರಿಂದ ಇಲ್ಲಿ ನಿಲುಗಡೆಯೇ ತೊಂದರೆಯಾಗಿದೆ. ನಿಲ್ದಾಣ ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿ ಎದುರಿನಲ್ಲಿ ಬಸ್ ನಿಲುಗಡೆ ಮಾಡಲಾಗುತ್ತಿದೆ. ಮಾರುಕಟ್ಟೆ ಬಳಿಯಲ್ಲಿ ವಿಶಾಲ ಬಸ್‌ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸ್ಥಳವನ್ನು ಗ್ರಾಮಪಂಚಾಯಿತಿ ಕಾಯ್ದಿರಿಸಿದೆ. ಪಟ್ಟಣದಲ್ಲಿ 200ಕ್ಕೂ ಅಧಿಕ ಆಟೊಗಳಿದ್ದು, ಅರ್ಧದಷ್ಟು ಆಟೊಗಳ ನಿಲುಗಡೆಗೆ ವ್ಯವಸ್ಥೆ ಇದೆ. ನಗರದ ಮಾರುಕಟ್ಟೆ ಬಳಿ ಬಸ್ ನಿಲ್ದಾಣಕ್ಕಾಗಿ ಜಾಗ ಕಾದಿರಿಸಿದ್ದು ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಜೊತೆಗೆ ಸರ್ಕಾರದಿಂದ ನಾಲ್ಕು ವರ್ಷಗಳ ಹಿಂದೆ ₹ 15ಲಕ್ಷ ಮಂಜೂರಾಗಿದ್ದು, ಕಾಮಗಾರಿ ಕೈಗೊಳ್ಳದ ಕಾರಣ ಬಿಡುಗಡೆಗೊಂಡ ಹಣ ಸರ್ಕಾರಕ್ಕೆ ವಾಪಸ್ಸಾಗಿದೆ.

ಗ್ರಾಮಪಂಚಾಯಿತಿ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ನಾಗರಿಕರ ಆಗ್ರಹ. ಇತ್ತೀಚೆಗೆ ಮಾರುಕಟ್ಟೆಯನ್ನು ಸ್ಥಳಾಂತರಿಸಿರು ವುದರಿಂದ ಮಾರುಕಟ್ಟೆ ಬಳಿ ವಾಹನ ನಿಲುಗಡೆಗೆ ಒಂದಷ್ಟು ಸ್ಥಳಾವಕಾಶ ದೊರೆತಿದೆ. ನಾಪೋಕ್ಲುವಿನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣದ ಕ್ರಿಯಾ ಯೋಜನೆಗೆ ಉಸ್ತು ವಾರಿ ಸಚಿವರ ಮೂಲಕ ಪ್ರಸ್ತಾವ ಸಲ್ಲಿಸಲಾಗಿದೆ. ಯೋಜನೆ ನೆರವೇರಲು ಕಾಲಾವಕಾಶ ಬೇಕು ಎನ್ನುತ್ತಾರೆ ಗ್ರಾಮಪಂಚಾಯಿತಿ ಸದಸ್ಯ ಮಾಚೆಟ್ಟೀರ ಕುಶುಕುಶಾಲಪ್ಪ. ಪೊಲೀಸ್ ಇಲಾಖೆ ಮತ್ತು ಗ್ರಾಮಪಂಚಾಯಿತಿ ಆಟೊ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವಾಹನ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಮೂವೇರ ವಿನುಪೂಣಚ್ಚ ಆಗ್ರಹಿಸುತ್ತಾರೆ.

ಆರೋಗ್ಯಕೇಂದ್ರದತ್ತ ಗಮನ ಹರಿಸಿ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಕೊರತೆಗಳೇ ತುಂಬಿವೆ. ಸಮುದಾಯ ಆರೋಗ್ಯಕೇಂದ್ರಕ್ಕೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಅಧಿಕವಾಗಿದ್ದು ತಜ್ಞ ವೈದ್ಯರೇ ಇಲ್ಲ. ಆರು ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ ಇಲ್ಲಿಗೆ ವೈದ್ಯರ ನೇಮಕ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡು ತ್ತಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭದ್ರತಾಸಿಬ್ಬಂದಿ ಇಲ್ಲ. ಮಹಿಳೆಯರ ತಪಾಸಣೆಗೆ ಸ್ತ್ರೀತಜ್ಞರಿಲ್ಲ. ವೈದ್ಯರ ನೇಮಕವಾದರೆ ಅವರು ಉಳಿದುಕೊಳ್ಳಲು ವಸತಿಗೃಹ ಗಳೂ ಇಲ್ಲ. ಸುಮಾರು 1.28 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಅಂತಸ್ತಿನ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದ್ದು, ವೈದ್ಯಾಧಿಕಾರಿಗಳು, ದಂತ ವೈದ್ಯರು, ಕ್ಷಕಿರಣ ತಂತ್ರಜ್ಞರು, ಸಿಬ್ಬಂದಿ ಸೇರಿದಂತೆ 42 ಸಿಬ್ಬಂದಿಗಳ ಅಗತ್ಯ ಇಲ್ಲಿಗೆ ಇದೆ.

‘ಹೋಬಳಿ ವ್ಯಾಪ್ತಿಯ ಪಾರಾಣೆ, ಚೆಯ್ಯಂಡಾಣೆ, ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ, ಚೇರಂಬಾಣೆ, ಭಾಗಮಂಡಲ ಸೇರಿದಂತೆ ಹಲವು ಗ್ರಾಮಾಂತರ ಪ್ರದೇಶಗಳ ಮಂದಿಗೆ ಈ ಆರೋಗ್ಯಕೇಂದ್ರ ಪ್ರಯೋಜನಕಾರಿಯಾಗಿದೆ. ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ’ ಎಂಬ ಅಭಿಪ್ರಾಯ ನಾಗರಿಕರದು.

ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಬೇಕು

ಪಟ್ಟಣಕ್ಕೆ ಆಗ್ಗಿಂದಾಗ್ಗೆ ತಲೆದೋರುವ ವಿದ್ಯುತ್‌ ಸಮಸ್ಯೆಯನ್ನು ನೀಗಿಸಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸು ತ್ತಾರೆ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿದ್ದಾಟಂಡ ಜಿನ್ನುನಾಣಯ್ಯ.

ಮೂರ್ನಾಡು ಪಟ್ಟಣದಿಂದ ನಾಪೋಕ್ಲುವಿಗೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್ ಸಂಪರ್ಕ ಕಲ್ಪಿಸಿ ದ್ದರೂ ಆಗ್ಗಿಂದಾಗ್ಗೆ ವಿದ್ಯುತ್ ವ್ಯತ್ಯಯವಾಗು ತ್ತಿದೆ. ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶ ಗಳ ಸಂಪರ್ಕ ಕಡಿತಗೊಳ್ಳುತ್ತವೆ. ಸಮರ್ಪಕ ವಿದ್ಯುತ್‌ ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸುತ್ತಾರೆ. ಕಾವೇರಿ ನದಿ ಸಮೀಪದಲ್ಲೇ ಹರಿಯುತ್ತಿದ್ದು ಜನರ ಮಿತಿಮೀರಿದ ಚಟುವಟಿಕೆಗಳಿಂದ ಕಲುಷಿತಗೊಳ್ಳುತ್ತಿದೆ.

ಬೇಸಿಗೆಯಲ್ಲಿ ಕಾವೇರಿ ತವರಿನಲ್ಲಿಯೇ ಜಲಾಭಾವ ಕಾಣಿಸಿಕೊಳ್ಳುತ್ತಿದೆ. ಕಾವೇರಿ ನದಿ ಸಂರಕ್ಷಣೆಯೊಂದಿಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಸೇವ್ ಕೊಡಗು ವೇದಿಕೆಯ ಸದಸ್ಯರು ಆಗ್ರಹಿಸುತ್ತಾರೆ. ಕೃಷಿಕರು ಹಲವು ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಕೃಷಿಕರ ಸಮಸ್ಯೆ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿ ನಿಧಿಗಳು ಗಮನಹರಿಸಬೇಕಾದ ಅಗತ್ಯ ವಿದೆ ಎಂದು ಅವರು ಒತ್ತಿ ಹೇಳುತ್ತಾರೆ.’

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದ್ದು, ಖಾಸಗಿ ಬಸ್‌ಗಳ ನಿಲುಗಡೆಗೆ ಹೆಚ್ಚಿನ ಸಮಯಾವಕಾಶ ನೀಡಬಾರದು. ಮಾರುಕಟ್ಟೆಯ ಬಳಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಿ ಪಟ್ಟಣದಲ್ಲಿ ಬಸ್‌ ನಿಲುಗಡೆಗೆ ಕನಿಷ್ಠ ಕಾಲಾವಧಿ ಮೀಸಲಿಡಬೇಕು.
 - ಸ್ಟೀಫನ್, ಖಾಸಗಿ ನೌಕರ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸೇವೆ ಬಯಸಿ ಗ್ರಾಮೀಣ ಪ್ರದೇಶಗಳಿಂದ ಸಾಕಷ್ಟು ಮಂದಿ ರೋಗಿಗಳು ಆಗಮಿಸುತ್ತಿದ್ದಾರೆ. ಆದರೆ ರೋಗಿಗಳ ತಪಾಸಣೆಗೆ ತಜ್ಞ ವೈದ್ಯರೇ ಇಲ್ಲ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಂಖ್ಯೆಯ ವೈದ್ಯರ ನೇಮಕವಾಗಬೇಕಿದೆ.
  – ಮನ್ಸೂರ್‌ ಆಲಿ, ಉದ್ಯಮಿ

ಮೂರ್ನಾಡು ಪಟ್ಟಣದಿಂದ ನಾಪೋಕ್ಲುವಿಗೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್ ಸಂಪರ್ಕ ಕಲ್ಪಿಸಿದ್ದರೂ ಆಗ್ಗಿಂದಾಗ್ಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಪಟ್ಟಣಕ್ಕೆ ಆಗ್ಗಿಂದಾಗ್ಗೆ ತಲೆದೋರುವ ವಿದ್ಯುತ್‌ ಸಮಸ್ಯೆಯನ್ನು ನೀಗಿಸಬೇಕಿದೆ. ಸೆಸ್ಕ್‌ ಇಲಾಖೆಗೆ ಕಿರಿಯ ಎಂಜಿನಿಯರ್‌ ನೇಮಕ ಮಾಡಬೇಕು
ಬಿದ್ದಾಟಂಡ ಜಿನ್ನು ನಾಣಯ್ಯ, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ, ನಾಪೋಕ್ಲು

ನಾಪೋಕ್ಲುವಿನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣದ ಕ್ರಿಯಾಯೋಜನೆಗೆ ಉಸ್ತುವಾರಿ ಸಚಿವರ ಮೂಲಕ ಪ್ರಸ್ತಾವ ಸಲ್ಲಿಸಲಾಗಿದೆ. ಯೋಜನೆ ನೆರವೇರಲು ಕಾಲಾವಕಾಶ ಬೇಕು. ಬಸ್‌ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲದಿರುವುದರಿಂದ ಸಮಸ್ಯೆಗಳೇ ಅಧಿಕ
ಕುಶುಕುಶಾಲಪ್ಪ, ಗ್ರಾಮಪಂಚಾಯಿತಿ ಸದಸ್ಯ, ನಾಪೋಕ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.