ADVERTISEMENT

ನಾಳೆಯಿಂದ ‘ಪೈಕೇರ ಕ್ರಿಕೆಟ್‌ ಜಂಬರ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 6:29 IST
Last Updated 20 ಏಪ್ರಿಲ್ 2017, 6:29 IST

ಮಡಿಕೇರಿ:  ಕೊಡಗು ಗೌಡ ಕುಟುಂಬಗಳ ನಡುವೆ ನಡೆಯುವ ಕ್ರಿಕೆಟ್ ಟೂರ್ನಿಯು ಏ. 21ರಿಂದ ಮಡಿಕೇರಿಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಕೊಡಗು ಗೌಡ ಯುವ ವೇದಿಕೆ ಮತ್ತು ಪೈಕೇರ ಕುಟಂಬಸ್ಥರು ಅಗತ್ಯ ತಯಾರಿಯಲ್ಲಿದ್ದಾರೆ. ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಎರಡು ಸುಸಜ್ಜಿತ ಮೈದಾನಗಳ ಸಿದ್ಧಗೊಳಿಸಲಾಗಿದೆ. 21ರಿಂದ ಆರಂಭ ವಾಗುವ ಪಂದ್ಯಾವಳಿಯು ಮೇ 4ರವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಮೇ 6ರಂದು ಕ್ವಾರ್ಟರ್‌ ಮತ್ತು  ಸೆಮಿಫೈನಲ್ ಪಂದ್ಯ ಹಾಗೂ ಮೇ 7ರಂದು ಅಂತಿಮ ಹಣಾಹಣಿ ನಡೆಯಲಿದೆ.

ಕಳೆದ ವರ್ಷ 180 ಕುಟುಂಬದ ತಂಡಗಳು ಪಾಲ್ಗೊಂಡಿದ್ದವು. ಇದೇ ಪ್ರಥಮ ಬಾರಿಗೆ 210 ಕುಟುಂಬ ತಂಡಗಳು ಪೈಕೇರ ಕ್ರಿಕೆಟ್ ಕಪ್‌ನಲ್ಲಿ ಭಾಗವಹಿಸಲಿದೆ ಎಂದು ಕೊಡಗು ಗೌಡ ಯುವ ವೇದಿಕೆಯ ಪ್ರಚಾರ ಸಮಿತಿ ಅಧ್ಯಕ್ಷ ಕುಡೇಕಲ್ ಸಂತೋಷ್ ಮಾಹಿತಿ ನೀಡಿದರು. ಪಂದ್ಯಾಟದ ಜೊತೆಯಲ್ಲಿ ಏ. 29ರಂದು ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ.

ಮಹಿಳೆಯರಿಗೆ ಕಬಡ್ಡಿ:  ಪಂದ್ಯಾಟದಲ್ಲಿ ಏಪ್ರಿಲ್ 30ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯ ನಡೆಸಲಾಗುವುದು. ಈ ಬಾರಿಯ ವಿಶೇಷ ಎಂಬಂತೆ ಮಹಿಳಾ ತಂಡಗಳೂ ಕಬಡ್ಡಿ ಆಟದಲ್ಲಿ ಪಾಲ್ಗೊಳ್ಳಲಿವೆ. ಕಬಡ್ಡಿಗೆ 32 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಅಲ್ಲದೇ, ಮಹಿಳೆಯರ ಎಂಟು ತಂಡಗಳು ಭಾಗವಹಿಸಲಿವೆ ಜೊತೆಗೆ ಥ್ರೋಬಾಲ್ ಪಂದ್ಯಾಟವು ನಡೆಯಲಿದೆ ಎಂದು ಸಂತೋಷ್ ತಿಳಿಸಿದರು.

ADVERTISEMENT

ಉದ್ಘಾಟನೆಯ ಕಾರ್ಯಕ್ರಮ:  ಅಂದು ಬೆಳಿಗ್ಗೆ ಓಂಕಾರೇಶ್ವರ ದೇವಾಲಯದಲ್ಲಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ನಂತರ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದವರೆಗೆ ಜನಾಂಗದ ಅಂತರ ರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಮಿಂಚಿದವರು ಕ್ರೀಡಾ ಜ್ಯೋತಿಯನ್ನು ತರಲಿದ್ದಾರೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಮಾಹಿತಿ ನೀಡಿದರು.

ಈ ಕ್ರಿಕೆಟ್ ಜಂಬರವನ್ನು 18 ವರ್ಷಗಳ ಹಿಂದೆ ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಮೊದಲ ಬಾರಿಗೆ ಆರಂಭಿಸಿತು. 5 ವರ್ಷಗಳಿಂದ ಯುವ ವೇದಿಕೆ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಯುವ ವೇದಿಕೆ ಉತ್ಸವಕ್ಕೆ ಸಂಪೂರ್ಣ ಸಹಕರಿಸಲಿದೆ ಎಂದು ಪುದಿನೆರವನ ರಿಶಿತ್ ಮಾದಯ್ಯ ಮಾಹಿತಿ ನೀಡಿದ್ದಾರೆ.

ಪೈಕೇರ ಕುಟುಂಬ:  ಬೆಳಿಗೇರಿ ಗ್ರಾಮದಲ್ಲಿ ಪೈಕೇರ ಕುಟುಂಬದ ಐನ್‌ಮನೆಯಿದೆ. 1815ರಲ್ಲಿ ಕೊಡಗಿನಲ್ಲಿ ಬಂದು ನೆಲೆಸಿದ್ದರು. ಇವರದು ಕೃಷಿ ಆಶ್ರಯ ಜೀವನ. ಮಡಿಕೇರಿ, ಪಾಲಿಬೆಟ್ಟ ಗೋಣಿಕೊಪ್ಪಲಿನಲ್ಲೂ ಹೆಚ್ಚಿನ ಕುಟುಂಬಗಳು ನೆಲೆಸಿವೆ ಎನ್ನುತ್ತಾರೆ ಆಯೋಜಕರು.

ಪಂದ್ಯಾಟಕ್ಕೆ ₹ 74 ಲಕ್ಷ ಖರ್ಚು:  ಮೈದಾನ ನಿರ್ವಹಣೆ  ಹಾಗೂ ಗ್ಯಾಲರಿ ವ್ಯವಸ್ಥೆಗೆ ₹ 5 ಲಕ್ಷ, ಮೈದಾನ ಸಿದ್ಧತೆಗೆ ₹ 4 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ₹ 8 ಲಕ್ಷ, ಟ್ರೋಫಿಗೆ ₹ 3 ಲಕ್ಷ, ನಗದು ಬಹುಮಾನ ₹ 2 ಲಕ್ಷ, ಊಟೋಪಚಾರ ₹ 6 ಲಕ್ಷ, ಸಭಾಂಗಣ ನಿರ್ವಹಣೆ, ಲೈಟಿಂಗ್‌ ವ್ಯವಸ್ಥೆಗೆ ₹ 15 ಲಕ್ಷ ಖರ್ಚಾಗಲಿದೆ ಎಂದು ಕ್ರಿಕೆಟ್ ಆಯೋಜಕರು ತಿಳಿಸಿದರು.
ಬಿ.ವಿಕಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.