ADVERTISEMENT

ಬಡವರಿಗೆ ‘ಉಜ್ವಲ’ ಯೋಜನೆ ತಲುಪಲಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:09 IST
Last Updated 24 ಮೇ 2017, 7:09 IST
ಬಡವರಿಗೆ ‘ಉಜ್ವಲ’ ಯೋಜನೆ ತಲುಪಲಿ
ಬಡವರಿಗೆ ‘ಉಜ್ವಲ’ ಯೋಜನೆ ತಲುಪಲಿ   

ಮಡಿಕೇರಿ: ‘ಅರ್ಹರಿಗೆ ಉಜ್ವಲ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಿ’ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರನ್ನು ಕೋರಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಉಜ್ವಲ’ ಅನುಷ್ಠಾನ ಸಂಬಂಧ ಮಂಗಳವಾರ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. 

‘ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಹಿಳೆಯರಿಗೆ ಅಡುಗೆ ಅನಿಲವನ್ನು ಉಚಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆ ಜಾರಿಗೊಳಿಸಿದೆ. ಸೀಮೆಎಣ್ಣೆ ಮುಕ್ತರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳಿಗೆ ಈ ಯೋಜನೆಯ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.

ದೇವಿಗ್ಯಾಸ್‌ನ ವ್ಯವಸ್ಥಾಪಕ ಕೆ.ಎಸ್. ರಮೇಶ್ ಮಾತನಾಡಿ, ‘ತೋಟದ ಲೈನ್‌ಮನೆಗಳಲ್ಲಿ ವಾಸ ಮಾಡುವವರು ಅನಿಲ ಸಂಪರ್ಕ ಹೊಂದಿರುವುದಿಲ್ಲ. ಸೀಮೆಎಣ್ಣೆ ವಿತರಿಸಿದರೆ ಸಾಕು ಎಂದು ಹೇಳುತ್ತಿದ್ದಾರೆ. ಕಡುಬಡವರು ಹಣ ಪಾವತಿಸಿ ಅನಿಲ ಸಂಪರ್ಕ ಪಡೆಯಲು ಮುಂದಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಬಿಪಿಎಲ್ ಕುಟುಂಬದವರ ಪಡಿತರ ಚೀಟಿಯಲ್ಲಿ ಪ್ರಥಮವಾಗಿ ಮಹಿಳೆಯರ ಹೆಸರಿದ್ದರೆ ಉಜ್ವಲ ಯೋಜನೆಗೆ ನೇರವಾಗಿ ಬದಲಾವಣೆ ಹೊಂದುತ್ತದೆ. ಪುರುಷರ ಹೆಸರು ಪ್ರಥಮ ಆಗಿದ್ದರೆ ಈ ಯೋಜನೆ ವ್ಯಾಪ್ತಿಗೆ ಒಳಪಡುವುದು ಕಷ್ಟ’ ಎಂದು ರಮೇಶ್‌ ಹೇಳಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್‌ಪಿಜಿ ಸಂಪರ್ಕ ಹೊಂದಿರದ ಬಿಪಿಎಲ್ ಕುಟುಂಬದವರಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ನೀಡಲು ಅಗತ್ಯ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು.

ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರದಿಂದ ₹ 1,600, ರಾಜ್ಯ ಸರ್ಕಾರದಿಂದ ₹ 1 ಸಾವಿರ ಎರಡು ಬರ್ನಾರ್‌ ಉಳ್ಳ ಗ್ಯಾಸ್ ಸ್ಟೌ ನೀಡಲಾಗುವುದು. ಅನಿಲ ಸಂಪರ್ಕವಿಲ್ಲದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಯೋಜನೆಗೆ ಅರ್ಹರು’ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದರು.

ಕೂರ್ಗ್ ಗ್ಯಾಸ್ ಏಜೆನ್ಸಿಯ ಈಶ್ವರ ಕುಮಾರ್, ವಿಜಯ ವಿನಾಯಕ ಗ್ಯಾಸ್ ಏಜೆನ್ಸಿಯ ಶಾಂತಕುಮಾರಿ, ರಾಜ ರಾಜೇಶ್ವರಿ ಗ್ಯಾಸ್ ಏಜೆನ್ಸಿಯ ಸಿ.ಎಂ. ಮಂದಣ್ಣ,  ಸುಬ್ರಮಣ್ಯ ಗ್ಯಾಸ್ ಏಜೆನ್ಸಿಯ ಮಾದಪ್ಪ, ಬೆನಕ ಗ್ಯಾಸ್ ಏಜೆನ್ಸಿಯ ಎಸ್.ಎನ್. ಶ್ರೀಧರ, ಪ್ರಜ್ಞಾ ಗ್ಯಾಸ್ ಏಜೆನ್ಸಿಯ ಪರೀಕ್ಷಿತ್ ಎಸ್.ವಿ, ಗಜಾನನ ಗ್ಯಾಸ್ ಏಜೆನ್ಸಿಯ ಪಿ.ಕೆ.ರವಿ, ರವಿರಾಜ್ ಗ್ಯಾಸ್ ಏಜೆನ್ಸಿಯ ಎನ್. ಪರಮಶಿವ, ವಿರಾಜಪೇಟೆ, ಕೊಡಗು ಇಂಡೇನ್ ಸರ್ವಿಸ್‌ನ ಚೈತ್ರ ಭಾರತೀಶ್ ಹಾಜರಿದ್ದರು.

* * 

ಜಿಲ್ಲೆಯ ಆದಿವಾಸಿಗಳು ಇನ್ನೂ ಎಲ್‌ಪಿಜಿ ಸಂಪರ್ಕ ಹೊಂದಿರುವುದಿಲ್ಲ. ಆದ್ದರಿಂದ ಜಿಲ್ಲೆಯ ಪ್ರತಿ ಬಡ ಕುಟುಂಬಕ್ಕೂ ಅನಿಲ ಸಂಪರ್ಕ ನೀಡಲು ಕ್ರಮ ತೆಗೆದುಕೊಳ್ಳಿ
ರಿಚರ್ಡ್‌ ವಿನ್ಸೆಂಟ್‌ ಡಿಸೋಜ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.