ADVERTISEMENT

ಬಾಡಿಗೆಗೆ ಬೈಕ್‌: ತೀವ್ರ ವಿರೋಧ

ಆಟೊ, ಜೀಪು, ಟ್ಯಾಕ್ಸಿ ಸೇವೆ ಬಂದ್‌ ಮಾಡಿ ಪ್ರತಿಭಟನೆ, ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:35 IST
Last Updated 16 ಫೆಬ್ರುವರಿ 2017, 9:35 IST
ಮಡಿಕೇರಿ: ಕೊಡಗಿನಲ್ಲಿ ಖಾಸಗಿ ಸಂಸ್ಥೆಯೊಂದು ಪ್ರವಾಸಿಗರಿಗೆ ಬಾಡಿಗೆಗೆ ಬೈಕ್‌ ನೀಡುವುದನ್ನು ವಿರೋಧಿಸಿ ಆಟೊ ಚಾಲಕರ ಮತ್ತು ಮಾಲೀಕ ಸಂಘ ಹಾಗೂ ಪ್ರವಾಸಿ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
 
ರಾಯಲ್ ಗ್ರೂಪ್‌ ಬೈಕ್‌ಗಳನ್ನು ಬಾಡಿಗೆ ನೀಡುತ್ತಿದ್ದು, ಕೂಡಲೇ ಸ್ಥಗಿತ ಗೊಳಿಸಬೇಕು ಎಂದು ಆಗ್ರಹಿಸಿದರು.  
 
ಬೈಕ್ ಸೇವೆಯಿಂದ ಆಟೊ ಹಾಗೂ ಪ್ರವಾಸಿ ವಾಹನ ಚಾಲಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. 15 ದಿನಗಳ ಒಳಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪ್ರತಿ ಭಟನಾಕಾರರು ಎಚ್ಚರಿಕೆ ನೀಡಿದರು.
 
ಆಟೊ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ, ಆಟೊ ಚಾಲಕರ ಹೊಟ್ಟೆಪಾಡಿಗೆ ಪೆಟ್ಟುಬೀಳುವ ಸಾಧ್ಯತೆ ಯಿದೆ. ಇದನ್ನು ಅರಿತು ಜಿಲ್ಲಾಡಳಿತ ಬೈಕ್‌ ಸೇವೆ  ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.
 
ತೀವ್ರ ವಿರೋಧದ ನಡುವೆಯೂ ಜಿಲ್ಲೆಯಲ್ಲಿ ಬಾಡಿಗೆ ಬೈಕ್‌ ಸೇವೆ ಆರಂಭಗೊಂಡಿದೆ. ಈ ಕೂಡಲೇ ಬೈಕ್ ಸೇವೆ ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಸನ್ನಭಟ್ ಎಚ್ಚರಿಕೆ ನೀಡಿದರು.
 
ಸಂಜೆ 6ರ ವರೆಗೆ ಆಟೊ, ಟ್ಯಾಕ್ಸಿ ಹಾಗೂ ಜೀಪು ಸೇವೆ ಬಂದ್‌ ಮಾಡ ಲಾಗಿತ್ತು. ಅಲ್ಲಲ್ಲಿ ಕೆಲವು ಆಟೊಗಳು ಮಾತ್ರ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. ಇದರಿಂದ ಸಾರ್ವಜನಿಕರು ಪರದಾಡಿದರು.
 
ಆಟೊ ಮಾಲೀಕ ಮತ್ತು ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್‌ಕುಮಾರ್, ಕಾವೇರಿ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್, ಪ್ರವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ವೀರೇಂದ್ರ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.