ADVERTISEMENT

ಬಾರ್‌ನಲ್ಲಿ ಗಲಾಟೆ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 8:24 IST
Last Updated 14 ಜುಲೈ 2017, 8:24 IST

ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಸಮೀಪದ ಮಾರುತಿ ಬಾರ್‌ನಲ್ಲಿ ಜುಲೈ 10ರಂದು ನಡೆದ ಗಲಾಟೆ ಹಾಗೂ ಕಲ್ಲು ತೂರಾಟ ಸಂಬಂಧ ಆರು ಮಂದಿ ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೆಡಿಕಲ್‌ ಕಾಲೇಜಿನಲ್ಲಿ ಸ್ಟೋರ್‌ ಕೀಪರ್‌ ಆಗಿ ಕೆಲಸ ಮಾಡುತ್ತಿರುವ ಅರ್ವತೊಕ್ಲು ಗ್ರಾಮದ ಟಿ.ಜಿ. ದೇಶಿಕ್‌, ಅದೇ ಕಾಲೇಜಿನ ಭದ್ರತಾ ಸಿಬ್ಬಂದಿ ಕಡಿಯತ್ತೂರು ಗ್ರಾಮದ ಕೆ.ಎನ್‌. ಮನೋಜ್‌, ಅರ್ವತೊಕ್ಲು ಗ್ರಾಮದ ಪಿ.ಡಿ. ಕುಶ, ಚೆಟ್ಟಳ್ಳಿಯ ಶ್ರವಣ್‌, ಫೈಯಾಜ್‌, ಮಂಗಳಾದೇವಿ ನಗರದ ಕಿರಣ್‌ ಬಂಧಿತರು.

ದೀಪು, ಶಿವ, ಪುಟ್ಟ ಎಂಬುವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಅಂದು ಸಂಜೆ ಬಾರ್‌ಗೆ ಬಂದಿದ್ದ ಗಾಳಿಬೀಡು ಗ್ರಾಮದ ಲವ, ಕೀರ್ತನ್‌ ಅವರೊಂದಿಗೆ ಅದೇ ಗ್ರಾಮದ ಮೊಣ್ಣಪ್ಪ ಅವರು ಬಂದೂಕು ಕಳವು ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮನೋಜ್‌ ಹಾಗೂ ದೇಶಿಕ್‌ ಅವರೊಂದಿಗೂ ವಾಗ್ವಾದ ನಡೆದಿತ್ತು.

ಬಾರ್‌ ಸಿಬ್ಬಂದಿ ಗಲಾಟೆ ಬಿಡಿಸುವಾಗ ಪರಸ್ಪರ ತಳ್ಳಾಟ ನೂಕಾಟ ನಡೆದಿತ್ತು. ಸಿಬ್ಬಂದಿಯ ಮೇಲೆ ಪತ್ರೀಕಾರ ತೀರಿಸಿಕೊಳ್ಳಲು ದೇಶಿಕ್, ಮನೋಜ್‌ ಸ್ನೇಹಿತರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದರು. ಸ್ಥಳಕ್ಕೆ ಬಂದ 11 ಮಂದಿ ಬಾರ್‌ ಸಿಬ್ಬಂದಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಮದ್ಯದ ಬಾಟಲ್‌ಗಳನ್ನು ಧ್ವಂಸಗೊಳಿಸಿದ್ದರು.

ಮೂವರು ಹೆಲ್ಮೆಟ್‌ ಧರಿಸಿದ್ದರು. ಸಿಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಇಬ್ಬರು ಅಮಾಯಕರಿದ್ದರು; ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾ ಗಿದೆ’ ಎಂದು ಮಾಹಿತಿ ನೀಡಿದರು.

ಡಿಸಿಐಬಿ ಇನ್‌ಸ್ಪೆಕ್ಟರ್‌ ಕರೀಂ ರಾವತ್ಕರ್‌, ಎಎಸ್‌ಐ ಕೆ.ವೈ. ಹಮೀದ್‌, ಸಿಬ್ಬಂದಿಗಳಾದ ಎನ್‌.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್‌, ಕೆ.ಎಸ್‌. ಅನಿಲ್‌ಕುಮಾರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.