ADVERTISEMENT

ಮಕ್ಕಳಿಗೆ ಪೌಷ್ಟಿಕ ಆಹಾರ ಅಗತ್ಯ

ನ್ಯಾಯಾಧೀಶ ಮಾಸ್ಟರ್ ಆರ್‌.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 8:53 IST
Last Updated 28 ಮಾರ್ಚ್ 2015, 8:53 IST
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾಸ್ಟರ್ ಆರ್‌.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಮಾತನಾಡಿದರು. ನ್ಯಾಯಾಧೀಶ ಕೆ. ಗೋಖಲೆ ಘಾಳಪ್ಪ, ಟಿ.ಸಿ. ಶ್ರೀಕಾಂತ್, ಸಿ.ಟಿ.  ಜೋಸೆಫ್, ಮೋಹನ್ ಮೊಣ್ಣಪ್ಪ, ವಿನೋದ್ ಕುಶಾಲಪ್ಪ ಇದ್ದಾರೆ
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾಸ್ಟರ್ ಆರ್‌.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಮಾತನಾಡಿದರು. ನ್ಯಾಯಾಧೀಶ ಕೆ. ಗೋಖಲೆ ಘಾಳಪ್ಪ, ಟಿ.ಸಿ. ಶ್ರೀಕಾಂತ್, ಸಿ.ಟಿ. ಜೋಸೆಫ್, ಮೋಹನ್ ಮೊಣ್ಣಪ್ಪ, ವಿನೋದ್ ಕುಶಾಲಪ್ಪ ಇದ್ದಾರೆ   

ಮಡಿಕೇರಿ: ಶಿಕ್ಷಣ, ಉದ್ಯೋಗ ರಂಗದಲ್ಲಿ ಹಲವು ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಂಡು ಮಹಿಳೆಯರು ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾಸ್ಟರ್ ಆರ್‌.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಹೇಳಿದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಲಯನ್- ಲಯನೆಸ್ ಕ್ಲಬ್, ಇನ್ನರ್‌ವೀಲ್, ರೋಟರಿ ಮಿಸ್ಟಿ ಹಿಲ್ಸ್, ವಕೀಲರ ಸಂಘ ಮತ್ತು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ  ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪೌಷ್ಟಿಕ ಆಹಾರವನ್ನು ನೀಡಬೇಕು. ಇದರಿಂದ ತಮ್ಮ ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ. ಗೋಖಲೆ ಘಾಳಪ್ಪ ಮಾತನಾಡಿ, ಸಮಾಜದಲ್ಲಿ ಶ್ರೀಮಂತ ಮಹಿಳೆಯರು ಬಡ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತಾರೆ. ಇದು ನಿಲ್ಲಬೇಕು. ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಜವಾಬ್ದಾರಿಯನ್ನು ತಿಳಿಯುವಂತಾಗಬೇಕು ಎಂದರು.

ವಕೀಲ ಕೆ.ಡಿ. ದಯಾನಂದ,  ಮಕ್ಕಳ ಸಮತೋಲನ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳೆಯರಿಗೆ ಇರುವ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಸಿ. ಶ್ರೀಕಾಂತ್, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್,  ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ವಿನೋದ್ ಕುಶಾಲಪ್ಪ  ಇದ್ದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರಮಾಡ ಮಾಚಮ್ಮ ಪೊನ್ನಪ್ಪ ಅವರನ್ನು ಗೌರವಿಸಲಾಯಿತು. ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮೀ ರಾಮಚಂದ್ರ ಸ್ವಾಗತಿಸಿದರು. ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಾದ ಭವ್ಯಾ, ಭವಿತಾ, ಅನಿತಾ ಪ್ರಾರ್ಥಿಸಿದರು. ಕವಿತಾ ನಿರೂಪಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.