ADVERTISEMENT

ಸುಗ್ಗಿ ಹಬ್ಬದ ಸಂಭ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 9:06 IST
Last Updated 11 ಏಪ್ರಿಲ್ 2017, 9:06 IST
ಸುಗ್ಗಿ ಹಬ್ಬದ ಸಂಭ್ರಮಕ್ಕೆ ಚಾಲನೆ
ಸುಗ್ಗಿ ಹಬ್ಬದ ಸಂಭ್ರಮಕ್ಕೆ ಚಾಲನೆ   

ಸೋಮವಾರಪೇಟೆ: ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸುಗ್ಗಿ ಉತ್ಸವಗಳು  ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತಿವೆ. ಮಳೆಗಾಲದ ಆರಂಭದಲ್ಲಿ ಜನರು ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ನಡೆಯುವ ಆಚರಣೆ ಇದು.

ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಾರದು, ಗ್ರಾಮ ಸುಭಿಕ್ಷವಾಗಿರಬೇಕು ಎಂದು  ಗ್ರಾಮದೇವರು, ಪ್ರಕೃತಿದೇವಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಈ  ಸುಗ್ಗಿ ಉತ್ಸವಗಳ ವಿಶೇಷ. ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.

ಇಂಥ ಸುಗ್ಗಿ ಉತ್ಸವ ಏಪ್ರಿಲ್‌ ಮೊದಲ ವಾರ ವಿವಿಧ ಗ್ರಾಮಗಳಲ್ಲಿ ಆರಂಭವಾಗಿವೆ.  ಈ ವ್ಯಾಪ್ತಿ ಗ್ರಾಮಗಳಲ್ಲಿ ಗ್ರಾಮದೇವರಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟುಗೂಡಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಪ್ರತೀತಿಯಿದೆ.

ADVERTISEMENT

ಸುಗ್ಗಿ ಉತ್ಸವ ಆರಂಭವಾದಂತೆ ಗ್ರಾಮದ ಮನೆಗಳಲ್ಲಿ ಗ್ರಾಮದೇವತೆಗಳಿಗೆ ಪೂಜೆ ನಡೆಯಲಿದೆ. ರೋಗ ರುಜಿನ ಬರಬಾರದು, ಉತ್ತಮ ಮಳೆ, ಕೃಷಿಯಾಗಿ  ಸಮೃದ್ಧ ಫಸಲು ಕೈಸೇರಲು ಹರಸಬೇಕು ಎಂದು ಗ್ರಾಮದೇವರಿಗೆ  ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿಸಾರು ಆಚರಣೆ: ಉತ್ಸವದ ಆರಂಭದಿಂದ 'ಸುಗ್ಗಿ ಸಾರು' ಎಂಬ ಕಟ್ಟುನಿಟ್ಟಿನ ಅಚರಣೆ ನಡೆಯಲಿದೆ. 15 ದಿನಗಳಲ್ಲಿ ಹಸಿ, ಮರ ಕಡಿಯುವುದು, ಒಣಗಿದ ಗಿಡ ಬಳ್ಳಿ ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ನೆಂಟರು ಮನೆ ಸೇರದಂತೆ ಎಚ್ಚರವಹಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಬರಮಾಡಿಕೊಳ್ಳುತ್ತಾರೆ. ಹಗಲು ಆಹಾರ ಸಾಮಗ್ರಿ ಖರೀದಿಸಬಾರದು ಎಂಬ ಕಟ್ಟುಪಾಡು ಇದೆ.

ಕೂತಿನಾಡು ಉತ್ಸವ: ಕೂತಿನಾಡು ಸುಗ್ಗಿ ಏಪ್ರಿಲ್‌ 17ರಂದು ಆರಂಭವಾಗಲಿದೆ. 15ದಿನ ನಡೆಯುವ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ.ಕೂತಿನಾಡು ಶ್ರೀ ಸಬ್ಬಮ್ಮದೇವಿ ತವರು ಎನ್ನಲಾದ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮಸ್ಥರು ಭಾನುವಾರ ಕೋವಿಗಳಿಗೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿದರು. ಕೂತಿನಾಡು ಸಬ್ಬಮ್ಮ ದೇವಿ (ಲಕ್ಷ್ಮಿ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಆಚರಣಗೆ ಸುಮಾರು 18 ಗ್ರಾಮಗಳ ಜನರು ಸೇರುತ್ತಾರೆ.

ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಇನ್ನಿತರ ಗ್ರಾಮಸ್ಥರು ಒಟ್ಟಾಗಿ ಆಚರಣೆ ಮಾಡುತ್ತಾರೆ.ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ಸುಗ್ಗಿ ಉತ್ಸವವು ಬಹುದೊಡ್ಡ ಉತ್ಸವ. ಬೀರೇದೇವರ ಹಬ್ಬ ಆಚರಣೆಯೊಂದಿಗೆ ಆರಂಭವಾಗಲಿದೆ. ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ, ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವುದು, ದೇವರ ಗಂಗಾಸ್ನಾನ ಉತ್ಸವದ ಭಾಗವಾಗಿವೆ.

ಈ ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿಯಲ್ಲೂ ಉತ್ಸವ ನಡೆಯಲಿವೆ.ಈಗ ಈ ವ್ಯಾಪ್ತಿಯಲ್ಲಿ ಭತ್ತ ಕೃಷಿ ಮುಗಿದಿದ್ದು, ಹೊಸ ಹಂಗಾಮು  ಆರಂಭಿಸಲು ಕೃಷಿಕರು ಮಳೆ ನಿರೀಕ್ಷೆಯಲ್ಲಿದ್ದಾರೆ. ಮಳೆಗೆ ಪ್ರಾರ್ಥಿಸುವುದು ಇದರ ಭಾಗವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.