ADVERTISEMENT

ಹಾಳಾಗುವ ಹಂತದಲ್ಲಿ ಹಾಕಿ ಟರ್ಫ್‌: ತೊಂದರೆ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ

ಕೆ.ಓಂಕಾರ ಮೂರ್ತಿ
Published 17 ಏಪ್ರಿಲ್ 2017, 6:59 IST
Last Updated 17 ಏಪ್ರಿಲ್ 2017, 6:59 IST
ಹಾಳಾಗುವ ಹಂತದಲ್ಲಿ ಹಾಕಿ ಟರ್ಫ್‌: ತೊಂದರೆ
ಹಾಳಾಗುವ ಹಂತದಲ್ಲಿ ಹಾಕಿ ಟರ್ಫ್‌: ತೊಂದರೆ   
ಮೈಸೂರು: ಚಾಮುಂಡಿ ವಿಹಾರ ಹಾಕಿ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟರ್ಫ್‌ ನಿರ್ವಹಣೆ ಕೊರತೆಯಿಂದ ಹಾಳಾಗುವ ಹಂತದಲ್ಲಿದ್ದು, ಆಟಗಾರರು ಪಡಿಪಾಟಲು ಪಡುವಂತಾಗಿದೆ.
 
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಸ್ತುವಾರಿಯಲ್ಲಿರುವ ಈ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜೂನಿಯರ್‌ ಹಾಗೂ ಸೀನಿಯರ್‌ ಹಾಕಿ ಚಾಂಪಿಯನ್‌ಷಿಪ್‌ಗೆ ಸದ್ಯ ರಾಜ್ಯ ತಂಡದ ಆಟಗಾರ್ತಿಯರು ತಾಲೀಮು ನಡೆಸುತ್ತಿದ್ದಾರೆ. 
 
ಸ್ವಚ್ಛಗೊಳಿಸುವ ‘ವಾಟರ್‌ ಪ್ರೆಸರ್‌ ಜೆಟ್‌’ ಯಂತ್ರವಿದ್ದರೂ ಪರಿಣತ ಸಿಬ್ಬಂದಿ ಇಲ್ಲದೆ ಟರ್ಫ್‌ನ ಒಂದು ಬದಿ ಪಾಚಿ ಕಟ್ಟಿದೆ. ಕೊಳವೆ ಬಾವಿ ನೀರು ಹಾಯಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ನೀರಿನೊಂದಿಗೆ ಬರುವ ಹೂಳಿನ ಕಣಗಳು ಟರ್ಫ್‌ನಲ್ಲಿ ಶೇಖರವಾಗುತ್ತಿದ್ದು, ಕಂದು ಬಣ್ಣಕ್ಕೆ ತಿರುಗಿದೆ. 
 
ಈ ಹಿಂದೆ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಅಂದಿನ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್‌ ಹಾಗೂ ಈಗಿನ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಕೂಡ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಸಮಸ್ಯೆ ಮಾತ್ರ ಹಾಗೆಯೇ ಇದೆ. ಹೀಗೆ ಬಿಟ್ಟರೆ ಟರ್ಫ್ ಸಂಪೂರ್ಣವಾಗಿ ಹಾಳಾಗುವ ಆತಂಕವನ್ನು ಆಟಗಾರರು ಹಾಗೂ ಕೋಚ್‌ಗಳು ವ್ಯಕ್ತಪಡಿಸಿದ್ದಾರೆ.
 
ಡಿವೈಇಎಸ್‌ ಕೋಚ್‌ ವಿಜಯಕೃಷ್ಣ ಅವರ ಮಾರ್ಗದರ್ಶನದಲ್ಲಿ ಈ ಟರ್ಫ್‌ನಲ್ಲಿ16 ದಿನಗಳಿಂದ ತರಬೇತಿ ಶಿಬಿರ ನಡೆಯುತ್ತಿದೆ. ಕ್ರೀಡಾ ಇಲಾಖೆಯ ಹಾಸ್ಟೆಲ್‌ ಹಾಗೂ ಮಡಿಕೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಒಟ್ಟು 36 ಆಟಗಾರ್ತಿಯರು ತಾಲೀಮಿನಲ್ಲಿ ಪಾಲ್ಗೊಂಡಿದ್ದಾರೆ.

ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ ಭೋಪಾಲ್‌ನಲ್ಲಿ ಇದೇ ತಿಂಗಳು 20ಕ್ಕೆ ಆರಂಭವಾಗಲಿದೆ. ಜೂನಿಯರ್‌ ಚಾಂಪಿಯನ್‌ಷಿಪ್‌ ಮೇ 4ರಿಂದ ಹರಿಯಾಣದ ರೋಹ್ಟಕ್‌ನಲ್ಲಿ ನಡೆಯಲಿದೆ. 
 
ಟರ್ಫ್‌ನಲ್ಲಿ ಪಾಚಿ ಬೆಳೆದು ಜಾರುತ್ತಿ ರುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಸ್ಥಳದಲ್ಲಿ ಆಡುವಾಗ ಆಟದತ್ತ ಚಿತ್ತ ಹರಿಸಲು ಸಾಧ್ಯವಾಗುತ್ತಿಲ್ಲ. ಟರ್ಫ್‌ನ ಒಂದು ಮೂಲೆ ಪಾಚಿ ಕಟ್ಟಿದ್ದು, ಇನ್ನುಳಿದ ಭಾಗಕ್ಕೂ ಹರಡುವ ಸಂಭವವಿದೆ.
 
‘ಆಟಗಾರ್ತಿಯರಿಗೆ ತೊಂದರೆ ಆಗಿರುವುದು ನಿಜ. ಪ್ರಮುಖ ಆಟಗಾರ್ತಿಯರು ಶಿಬಿರದಲ್ಲಿ ಇದ್ದಾರೆ. ಕೊಳವೆ ಬಾವಿಯ ನೀರನ್ನು ಶುದ್ಧೀಕರಿಸಿ ಬಿಟ್ಟರೆ ಯಾವುದೇ ಸಮಸ್ಯೆ ಉಂಟಾಗದು. ಟರ್ಫ್‌ ಸ್ವಚ್ಛಗೊಳಿಸಲು ಒಂದು ತಿಂಗಳು ಬೇಕು’ ಎಂದು ಕೋಚ್‌ ವಿಜಯಕೃಷ್ಣ  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  
***
₹ 2.85 ಕೋಟಿ ವೆಚ್ಚದ ಟರ್ಫ್‌
₹ 2.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್‌ ಟರ್ಫ್‌ಗೆ 2013ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಟರ್ಫ್‌ ನಿರ್ಮಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅನುದಾನ ನೀಡಿತ್ತು. ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಈ ಕ್ರೀಡಾಂಗಣ ನಿರ್ವಹಣೆ ಹೊಣೆ ಹೊತ್ತಿದೆ.
***
ಸದ್ಯ ವಾರಕ್ಕೊಮ್ಮೆ ಆಟಗಾರ್ತಿಯರೇ ಹಾಕಿ ಟರ್ಫ್‌ ಸ್ವಚ್ಛಪಡಿಸುತ್ತಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಟರ್ಫ್‌ ಹಾಳಾಗುತ್ತದೆ
ವಿಜಯಕೃಷ್ಣ, ಡಿವೈಇಎಸ್‌ ಹಾಕಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.