ADVERTISEMENT

ಹೋರಾಟ ತೀವ್ರಗೊಳಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 7:23 IST
Last Updated 17 ನವೆಂಬರ್ 2017, 7:23 IST

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ ಅಲ್ಲಿನ ಗಾಂಧಿ ಮಂಟಪದ ಬಳಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರಿಯಿತು

ಪೊನ್ನಂಪೇಟೆ ಎಂ.ಜಿ.ನಗರದ ಯುವಕ ಸಂಘ, ತಾಲ್ಲೂಕು ಬೆಳೆಗಾರರ ಒಕ್ಕೂಟ, ರೈತ ಸಂಘ, ನಾಗರಿಕ ವೇದಿಕೆ ಹಾಗೂ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಪಾಲ್ಗೊಂಡು ಧರಣಿ ನಡೆಸಿದರು.

ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ‘ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಜಿಲ್ಲೆಯಿಂದ ಅಪಾರ ತೆರಿಗೆ ಲಭಿಸುತ್ತಿದೆ. ಕಾಫಿ, ಭತ್ತ, ಮೆಣಸು, ಏಲಕ್ಕಿ, ಕಿತ್ತಳೆ ಮೂಲಕ ಬಹಳಷ್ಟು ಆದಾಯ ಲಭಿಸುತ್ತಿದೆ. ಜತೆಗೆ ಪೊನ್ನಂಪೇಟೆ ತಾಲ್ಲೂಕು ರಚಿಸಲು ಹೆಚ್ಚಿನ ಆರ್ಥಿಕ ಹೊರೆಯೂ ಬರಲಾರದು ಏಕಂದರೆ ತಾಲ್ಲೂಕಿನ ಎಲ್ಲ ಕಚೇರಿಗಳು ಈಗಾಗಲೆ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ನೂತನ ನ್ಯಾಯಾಲದ ಕಟ್ಟಡ ಕೂಡ ಒಂದು ವಾರದಲ್ಲಿ ಉದ್ಘಾಟನೆಗೊಂಡು ಕಾರ್ಯನಿರ್ವಹಿಸಲಿದೆ. ಸರ್ಕಾರ ಇದನ್ನೆಲ್ಲ ಮನಗಂಡು ನೂತನ ತಾಲ್ಲೂಕು ಕೇಂದ್ರವನ್ನು ರಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರದ ನೀತಿ ಏನೇ ಇದ್ದರೂ ಎದೆಗುಂದುವುದು ಬೇಡ. ನ್ಯಾಯಯುತ ಹೋರಾಟಕ್ಕೆ ಫಲ ಸಿಕ್ಕೇ ಸಿಗುತ್ತದೆ. ಯಾರೂ ನಿರಾಶರಾಗಬಾರದು. ಹೋರಾಟವನ್ನು ಮತ್ತಷ್ಟು ತೋವ್ರಗೊಳಿಸೋಣ. ಗ್ರಾಮ ಪಂಚಾಯಿತಿಗಳಿಂದ ರಾಜ್ಯದ ಬೊಕ್ಕಸಕ್ಕೆ ಹೋಗುವ ತೆರಿಗೆ ಹಣದ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಿ ಸಲ್ಲಿಸೋಣ ಎಂದು ಕರೆ ನೀಡಿದರು.
ಉದ್ದೇಶಿತ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳು ತಾವು ಸಲ್ಲಿಸುವ ತೆರಿಗೆ ಹಣದ ಬಗ್ಗೆ ಮಾಹಿತಿ ನೀಡಬೇಕು. ಇದರ ವಿವರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.

ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ಕಾಳಿಮಾಡ ಮೋಟಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ, ಅಧ್ಯಕ್ಷೆ ಸುಮಿತಾ, ಕಿರುಗೂರಿನ ಸರಾ ಚಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ, ಪುಚ್ಚಿಮಾಡ ಲಾಲಾ ಪೂಣಚ್ಚ ಹಾಜರಿದ್ದರು.

ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಕ್ರಮ
ಗೋಣಿಕೊಪ್ಪಲು: ರಾಜ್ಯ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಪೊನ್ನಂಪೇಟೆ ಹಾಗೂ ಕುಶಾಲನಗರದ ಕಾವೇರಿ ತಾಲ್ಲೂಕುಗಳನ್ನು ರಚಿಸುವ ಬಗ್ಗೆ ಪರೀಶೀಲನೆ ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಜಿಲ್ಲೆಯಲ್ಲಿ ಎರಡು ತಾಲ್ಲೂಕುಗಳನ್ನು ರಚಿಸಬೇಕು ಎಂದು ಒತ್ತಾಯಿಸಿ ನೀಡಿದ ಪತ್ರಕ್ಕೆ ಉತ್ತರಿಸಿದ ಅವರು, ‘ಯಾವುದೇ ಹೋಬಳಿ ಅಥವಾ ತಾಲ್ಲೂಕನ್ನು ರಚಿಸಬೇಕಾದರೆ ಹಣಕಾಸಿನ ಪರಿಸ್ಥಿತಿಯನ್ನು ಪರಿಗಣಿಸಬೇಕಾಗಿದೆ. ಹೊಸ ತಾಲ್ಲೂಕುಗಳ ರಚಿಸುವ ಪ್ರಸ್ತಾವ ಹಣಕಾಸಿನ ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಹಣಕಾಸಿನ ಇತಿಮಿತಿಗಳನ್ನು ಒಳಗೊಂಡಿರುತ್ತವೆ’ ಎಂದು ಅವರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.