ADVERTISEMENT

ಅಧಿಕಾರಿಗಳಿಗೆ ಜನಪ್ರತಿನಿಧಿಗಳೆಂದರೆ ತಾತ್ಸಾರ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷೆ– ಉಪಾಧ್ಯಕ್ಷೆ ತರಾಟೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:35 IST
Last Updated 16 ಫೆಬ್ರುವರಿ 2017, 10:35 IST
ಕೋಲಾರ: ‘ಅಧಿಕಾರಿಗಳಿಗೆ ಜನಪ್ರತಿನಿಧಿಗಳೆಂದರೆ ತಾತ್ಸಾರ. ಅವರಿಗೆ ಜನಪ್ರತಿನಿಧಿಗಳ ಬಗ್ಗೆ ಸ್ವಲ್ಪವೂ ಗೌರವವಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಗೀತಾ ಹಾಗೂ ಉಪಾಧ್ಯಕ್ಷೆ ಕೆ.ಯಶೋಧಮ್ಮ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
 
ಇಲ್ಲಿನ ಜಿ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವ ಅಧಿಕಾರಿಗಳ ತಮ್ಮ ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಆದರೆ, ಬೇರೆ ಎಲ್ಲರ ಕರೆಗಳನ್ನು ಸ್ವೀಕರಿಸುತ್ತಾರೆ. ಅಧಿಕಾರಿಗಳು ತಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರಾ ಎಂದು ಪ್ರಶ್ನಿಸಿದರು.
 
‘ನನ್ನ ಕಚೇರಿಯ ಶೌಚಾಲಯಕ್ಕೆ ಚಿಲಕವಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ 6 ತಿಂಗಳು ಕಳೆದರೂ ಶೌಚಾಲಯ ರಿಪೇರಿ ಮಾಡಿಸಿಲ್ಲ. ಹೆಣ್ಣು ಮಗಳಾಗಿ ಇಂತಹ ಸಣ್ಣ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಲು ಮುಜುಗರವಾಗುತ್ತದೆ. ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲವಾಗಿದೆ’ ಎಂದು ಉಪಾಧ್ಯಕ್ಷ ಯಶೋಧಮ್ಮ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
 
‘ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕೊಠಡಿಗಳಲ್ಲಿನ ಟೇಬಲ್‌ಗಳನ್ನು ಬದಲಿಸುವಂತೆ ಮನವಿ ಮಾಡಿ 6 ತಿಂಗಳಾದರೂ ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ. ಹಾಗಾದರೆ ನಿಮ್ಮ ಉದ್ದೇಶವಾದರೂ ಏನು’ ಎಂದು ಅಧ್ಯಕ್ಷೆ ಗೀತಾ ಖಾರವಾಗಿ ಪ್ರಶ್ನಿಸಿದರು.
 
ತಮ್ಮ ಕ್ಷೇತ್ರದ ವ್ಯಾಪ್ತಿಯ ಶಾಲೆಯೊಂದಕ್ಕೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಒಂದು ವರ್ಷದಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವಂತೆ ತಿಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಸಂಬಂಧ ವಿಚಾರಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದಿಲ್ಲ ಎಂದು ಯಶೋಧಮ್ಮ ಅಸಮಾಧಾನ ವ್ಯಕ್ತಪಡಿಸಿದರು.
 
ಜವಾಬ್ದಾರಿ ಇಲ್ಲವೇ: ಉಪಾಧ್ಯಕ್ಷರ ಮಾತಿಗೆ ದನಿಗೂಡಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ‘ಜನಪ್ರತಿನಿಧಿಗಳ ಮಾತನ್ನೇ ಕೇಳದ ನೀವು ಜನಸಾಮಾನ್ಯರ ಕೆಲಸಗಳನ್ನು ಹೇಗೆ ಮಾಡುತ್ತೀರಿ. ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವೇ. ನನ್ನ ಕೊಠಡಿ ದುರಸ್ಥಿ ಮಾಡುವಂತೆ 6 ತಿಂಗಳಿಂದ ಹೇಳುತ್ತಿದ್ದರೂ ಕೈಚೆಲ್ಲಿ ಕುಳಿತಿದ್ದೀರಿ’ ಎಂದು ಕಿಡಿಕಾರಿದರು.
 
ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿದರೆ, ಮುಂದಿನ ಸಭೆಯಲ್ಲಿ ಕೊಡುತ್ತೇವೆ ಎಂದು ಒಪ್ಪಿಕೊಳ್ಳುವ ಅಧಿಕಾರಿಗಳು ಮತ್ತೆ ಪತ್ತೆ ಇರುವುದಿಲ್ಲ. ಇನ್ನೊಂದು ಸಭೆಯಲ್ಲಿ ಹಳೇ ಮಾತನ್ನೇ ಹೇಳುತ್ತಾರೆ. ಆದರೆ, ಯಾರೂ ಮಾಹಿತಿ ಕೊಡುವುದಿಲ್ಲ ಎಂದು ದೂರಿದರು.
 
ಕಡ್ಡಾಯವಾಗಿ ಸ್ವೀಕರಿಸಿ: ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ‘ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಇತರೆ ಯಾವುದೇ ಸದಸ್ಯರ ದೂರವಾಣಿ ಕರೆ ಬಂದಾಗ ಅಧಿಕಾರಿಗಳು ಕಡ್ಡಾಯವಾಗಿ ಸ್ವೀಕರಿಸಬೇಕು. ತುರ್ತು ಕೆಲಸವಿದ್ದರೆ ನಂತರ ಕರೆ ಮಾಡಿ ವಿಚಾರಿಸಬೇಕು. ಸಭೆಯಲ್ಲಿ ಜನಪ್ರತಿನಿಧಿಗಳು ಕೇಳಿದ ಮಾಹಿತಿಯನ್ನು ನಿಗದಿತ ಸಮಯದೊಳಗೆ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
 
ಜಿ.ಪಂ ಕಟ್ಟಡದ ದುರಸ್ಥಿ ಕಾಮಗಾರಿಯನ್ನು ಮೂರು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶೌಚಾಲಯ ರಿಪೇರಿ, ಪೀಠೋಪಕರಣಗಳ ಬದಲಾವಣೆ  ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
 
‘ಅಧಿಕಾರಿಗಳು ನನ್ನ ಗಮನಕ್ಕೆ ತರದೆ ಆರೋಗ್ಯ ಇಲಾಖೆಯ ಕಟ್ಟಡವೊಂದರ ಸ್ವರೂಪ ಬದಲಾವಣೆ ಮಾಡಿದ್ದಾರೆ. ನನಗೆ ವಿಷಯ ತಿಳಿಸದೆ ಅಧಿಕಾರಿಗಳೇ ನಿರ್ಧಾರ ಮಾಡುವುದಕ್ಕೆ ಇದು ಕಡ್ಲೆ ಪುರಿ ವ್ಯಾಪಾರವೇ’ ಎಂದು ಅಧ್ಯಕ್ಷೆ ಗೀತಾ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಿಇಒ ಕಾವೇರಿ, ‘ಆಗ್ನೇಯ ಶಿಕ್ಷಕರ ಕ್ಷೇತ್ರದ ಉಉ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ ಅಧಿಕಾರಿಗಳ ಕಟ್ಟಡ ಕಾಮಗಾರಿಯ ಸಂಗತಿಯನ್ನು ನಿಮ್ಮ ಗಮನಕ್ಕೆ ತಂದಿಲ್ಲ. ಕಾಮಗಾರಿಯ ಸ್ವರೂಪ ಬದಲಾಗಿದೆಯೇ ಹೊರತು ಜಾಗ ಬದಲಾಗಿಲ್ಲ’ ಎಂದು ತಿಳಿಸಿದರು.
 
ಕಾರ್ಯ ಒತ್ತಡ:‘ಜಿಲ್ಲೆಯಲ್ಲಿ ಒಟ್ಟು 5 ಶಿಶು ಅಭಿವೃದ್ಧಿ ಅಧಿಕಾರಿಗಳ (ಸಿಡಿಪಿಒ) ಹುದ್ದೆಗಳಿದ್ದು, ಈ ಪೈಕಿ 4 ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕರ ಹಾಗೂ ಲೆಕ್ಕಾಧಿಕಾರಿಗಳ ಹುದ್ದೆಗಳೂ ಖಾಲಿ ಇವೆ. ಹೀಗಾಗಿ ಇಲಾಖೆಯ ಸಿಬ್ಬಂದಿಯ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಭಾಸ್ಕರ್‌ ಹೇಳಿದರು.
 
ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕರನ್ನು ಆಯ್ಕೆ ಮಾಡುವಾಗ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿನ ವಿಧವೆಯರಿಗೆ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ. ಆದ ಕಾರಣ ಈ ಹುದ್ದೆಗಳಿಗೆ ವಿಧವೆಯರು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಇದ್ದರೂ ಅವರಿಗೆ ಮೊದಲ ಆದ್ಯತೆ ಕೊಡಿ’ ಎಂದು ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
 
ಬೇಸಿಗೆಗಾಲ ಆರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಹೊಸ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ವಾರ ಸಭೆ ನಡೆಸಿ, ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿ ಮಾಡಬೇಕು ಎಂದು ಸಿಇಒ ಕಾವೇರಿ ಅಧಿಕಾರಿಗಳಿಗೆ ತಿಳಿಸಿದರು.
 
ನೀರಿಗೆ ಕ್ರಮ ವಹಿಸಿ: ನೀರಿನ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೊಳವೆ ಬಾವಿಗಳನ್ನು ಕೊರೆದ ಬೋರ್‌್ವೆಲ್‌ ಲಾರಿ ಮಾಲೀಕರಿಗೆ ಸುಮಾರು ₹ 20 ಕೋಟಿ ಬಾಕಿ ಬಿಲ್‌ ಕೊಡಬೇಕಿದೆ. ಹೀಗಾಗಿ ಅವರು ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು ಮುಂದೆ ಬರುತ್ತಿಲ್ಲ. ಸರ್ಕಾರದಿಂದ ಇತ್ತೀಚೆಗೆ ಸ್ವಲ್ಪ ಹಣ ಬಿಡುಗಡೆಯಾಗಿದ್ದು, ಬೋರ್‌್ವೆಲ್‌ ಲಾರಿ ಮಾಲೀಕರಿಗೆ ಬಾಕಿ ಬಿಲ್‌ ಪಾವತಿಸಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.