ADVERTISEMENT

ಅಸ್ಪೃಶ್ಯತೆ ಇಂದಿಗೂ ಜೀವಂತ: ಕಳವಳ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:41 IST
Last Updated 9 ಜನವರಿ 2017, 9:41 IST

ಕೋಲಾರ: ‘ಅಸ್ಪೃಶ್ಯತೆಯ ವಿಚಾರಗಳು ಇಂದಿಗೂ ಜೀವಂತವಾಗಿರುವುದು ವಿಷಾದನೀಯ’ ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.
ನಗರದ ಲಯನ್ಸ್ ಭವನದಲ್ಲಿ ಸಮುದಾಯ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ವರ್ತಮಾನದ ಜತೆ ಡಾ.ಬಿ.ಆರ್.ಅಂಬೇಡ್ಕರ್ ಮರು ಓದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು.

ಅಸ್ಪೃಶ್ಯತೆ ನೋವು ಮನುಷ್ಯತ್ವ ಇರುವವರಿಗೆ ಮಾತ್ರವೇ ಅರ್ಥವಾಗುತ್ತದೆ. ಅಂದಿನ ಚಳವಳಿ ಮೂಲ ಹಸಿವು, ಬಡತನಗಳಾಗಿದ್ದವು. ಆದರೆ ಇಂದು ಅಸ್ಪೃಶ್ಯತೆ, ಅವಮಾನ ಮೂಲದ ಚಳವಳಿಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಆಗ ಭೂಮಿ, ಕೆಲಸಕ್ಕಾಗಿ ಚಳವಳಿಗಳಿದ್ದವು ಇಂದು ಕೇವಲ ಗೌರವಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಹೋರಾಟಗಳನ್ನು ನಡೆಸುತ್ತಿರುವುದು ಅತಂಕಕಾರಿ ವಿಷಯ ಎಂದರು.

ರಾಜ್ಯದಲ್ಲಿ ಒಂದು ಗ್ರಾಮ ಪಂಚಾಯಿತಿ ಕಚೇರಿಗೆ ದಲಿತ ಮಹಿಳಾ ಸದಸ್ಯರಿಗೆ ಪ್ರವೇಶ ಇಲ್ಲದ ಬಗ್ಗೆ ಸುದ್ದಿಯಾಗಿದೆ. ದಲಿತರಾಗಿ ಹುಟ್ಟಿದ ಕಾರಣಕ್ಕಾಗಿ ಪ್ರವೇಶವನ್ನೇ ನಿರಾಕರಿಸಲಾಗಿದೆ. ಸದಸ್ಯರಿಗೆ ಇಂತಹ ಪರಿಸ್ಥಿತಿ ಬಂದಿದ್ದರೆ ಆ ಭಾಗದ ದಲಿತ ಮಹಿಳೆ ಗತಿಯೇನಾಗಬೇಕು ಎಂದು ಹೇಳಿದರು.

ಸಮಾಜದಲ್ಲಿ ಯಾವುದೇ ವಿಚಾರಗಳು ಹೊರ ಬಂದಕೂಡಲೇ ಅದು ಯಾರಿಂದ ಬಂತು ಎನ್ನುವುದನ್ನು ನೋಡುತ್ತಾರೆಯೇ ಹೊರತು ಅದರಲ್ಲಿ ಏನಿದೆ ಎನ್ನುವುದನ್ನು ಅರಿಯಲು ಯಾರೂ ಮುಂದಾಗುವುದಿಲ್ಲ. ಅದರಲ್ಲಿಯೂ ಜಾತಿಯ ಹುಡುಕಾಟ ನಡೆಯುತ್ತವೆ ಎಂದು ತಿಳಿಸಿದರು.

ದಲಿತರು ಮಾತ್ರವಲ್ಲದೆ ಎಲ್ಲರಿಗೂ ಅನ್ವಯಿಸುವಂತೆ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಈ ಎಲ್ಲವನ್ನು ಬಿಟ್ಟು ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಲು ಅಂಬೇಡ್ಕರ್‌ ಅವರ ಮರು ಓದು ಅಗತ್ಯ ಎಂದು ಸಲಹೆ ನೀಡಿದರು.

ಆರ್ಥಿಕ ಪ್ರಗತಿಯು ದೇಶವನ್ನು ಎತ್ತರದಲ್ಲಿ ನಿಲ್ಲಿಸಲು ಆಗುವುದಿಲ್ಲ. ಸಾಮಾಜಿಕ ಪ್ರಗತಿಯೂ ಅವಶ್ಯವಾಗಿದೆ. ಸಮಾಜವು ಕೇವಲ ಹಣದಿಂದ ನಿಲ್ಲಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ನೋಟು ಅಮಾನ್ಯೀಕರಣ ಮಾಡಿದ್ದರಿಂದ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದೆ ಎಂದು ಹೇಳಿದರು.

ಭಾರತ ಗಣರಾಜ್ಯ ದೇಶ. ಗಣ ರಾಜ್ಯ ಎನ್ನುವುದು ಹೊರ ವರ್ಣವಷ್ಟೆ. ಆದರೆ ಒಳಗೆ ಅಸ್ಪೃಶ್ಯತೆ, ಜಾತಿ ಪದ್ಧತಿಗಳು ತುಂಬಿಕೊಂಡಿದ್ದು, ಜಾತಿ ವಿನಾಶಕ್ಕೆ ತಿಳವಳಿಕೆಯನ್ನು ಸಾಮಾನ್ಯರಿಗೆ ತಿಳಿಸಬೇಕಾಗಿದೆ ಎಂದರು.

ಸಮುದಾಯ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ, ವಿಚಾರವಾದಿ ಅರಿವು ಜಿ.ಶಿವಪ್ಪ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ರಾಜ್ಯೋತ್ಸವ ಪುರಸ್ಕೃತ ಸಿ.ಎಂ.ಮುನಿಯಪ್ಪ, ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ವಿ.ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.