ADVERTISEMENT

ಇಲ್ಲ... ನಡುವೆ ಹಳೇ ಬಡಾವಣೆ

ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ, ನಾಯಿ ಕಾಟ; ಸಮಸ್ಯೆಗಳ ಸರಮಾಲೆ: ಸ್ಥಳೀಯರ ಬದುಕು ನರಕಸದೃಶ

ಜೆ.ಆರ್.ಗಿರೀಶ್
Published 18 ಜೂನ್ 2018, 8:29 IST
Last Updated 18 ಜೂನ್ 2018, 8:29 IST
ಕೋಲಾರದ ಹಳೆ ಬಡಾವಣೆಯ ಸಾಯಿ ಬಾಬಾ ಮಂದಿರ ಮುಂಭಾಗದ ರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿರುವುದು
ಕೋಲಾರದ ಹಳೆ ಬಡಾವಣೆಯ ಸಾಯಿ ಬಾಬಾ ಮಂದಿರ ಮುಂಭಾಗದ ರಸ್ತೆ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿರುವುದು   

ಕೋಲಾರ: ಹನಿ ಹನಿ ನೀರಿಗೂ ತತ್ವಾರ... ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ.... ಚರಂಡಿ ತುಂಬಾ ಕೊಳಚೆ ನೀರು... ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ... ಹಾದಿ ಬೀದಿಯಲ್ಲಿ ನಾಯಿ ಕಾಟ...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಹಳೆ ಬಡಾವಣೆಯ ದುಸ್ಥಿತಿ. ಕುಡಿಯುವ ನೀರು, ಕಸದ ಸಮಸ್ಯೆ, ಬೀದಿ ದೀಪ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ನಗರಸಭೆಯ 12ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಈ ಬಡಾವಣೆಯು ನಗರದ ಹಳೇ ಬಡಾವಣೆಗಳಲ್ಲಿ ಒಂದಾಗಿದೆ. ನಗರಸಭೆ ಆಡಳಿತ ಯಂತ್ರವು ಬಡಾವಣೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ADVERTISEMENT

ಬಡಾವಣೆಯ ಕೆಲವೆಡೆ ಇತರೆ ಬಡಾವಣೆಗಳಂತೆಯೇ ನೀರಿನ ಸಮಸ್ಯೆ ಗಂಭೀರವಾಗಿದೆ. ಮುಖ್ಯವಾಗಿ ಮಹಿಳಾ ಸಮಾಜ ಶಾಲೆ ಸುತ್ತಮುತ್ತಲಿನ ಮನೆಗಳ ನಲ್ಲಿಯಲ್ಲಿ ನೀರು ಬಂದು ದಶಕವೇ ಕಳೆದಿದೆ. ಈ ಭಾಗದ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ಹೊಸದಾಗಿ ಕೊಳವೆ ಬಾವಿ ಕೊರೆಸಿಲ್ಲ. ಹೀಗಾಗಿ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕ ಬಡಾವಣೆಗೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.

ನೆಪ ಮಾತ್ರಕ್ಕೆ ತಿಂಗಳಲ್ಲಿ ಎರಡು ಬಾರಿ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. 15 ದಿನಕ್ಕೊಮ್ಮೆ ಪ್ರತಿ ಮನೆಗೆ ಹೆಚ್ಚೆಂದರೆ 10ರಿಂದ 15 ಬಿಂದಿಗೆ ನೀರು ಕೊಡಲಾಗುತ್ತಿದೆ. ನೀರು ಸಾಕಾಗದ ಕಾರಣ ಸ್ಥಳೀಯರು ಖಾಸಗಿ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಟ್ಯಾಂಕರ್‌ ಲೋಡ್‌ ನೀರಿಗೆ ₹ 500 ಇದ್ದು, ಸ್ಥಳೀಯರು ದುಡಿಮೆಯ ಬಹುಪಾಲು ಹಣವನ್ನು ನೀರು ಖರೀದಿಗೆ ಖರ್ಚು ಮಾಡುವ ಪರಿಸ್ಥಿತಿ ಇದೆ.

ನಗರದಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದರೂ ಸ್ಥಳೀಯರಿಗೆ ನೀರಿನ ಬವಣೆ ತಪ್ಪಿಲ್ಲ. ನೀರು ಲಭ್ಯವಿರುವ ಕೊಳವೆ ಬಾವಿಯ ಪಂಪ್‌, ಮೋಟರ್‌ ಮತ್ತು ಪೈಪ್‌ಗಳನ್ನು ರಾತ್ರೋರಾತ್ರಿ ಮೇಲೆತ್ತಿ ಬೇರೆಡೆಗೆ ಸಾಗಿಸಲಾಗಿದೆ. ಕೊಳವೆ ಬಾವಿಗೆ ಹೊಸ ಪಂಪ್‌, ಮೋಟರ್‌ ಅಳವಡಿಸುವಂತೆ ಸ್ಥಳೀಯರು ಏಳೆಂಟು ತಿಂಗಳಿಂದ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಚರಂಡಿ ಅವಾಂತರ: ಸಾಯಿ ಬಾಬಾ ಮಂದಿರ ಹಿಂಭಾಗದ ಚರಂಡಿ ಸ್ವಚ್ಛಗೊಳಿಸಿ ವರ್ಷವೇ ಕಳೆದಿದೆ. ಹೀಗಾಗಿ ಚರಂಡಿಯಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆಗೆ ಹರಿದು ಅವಾಂತರ ಸೃಷ್ಟಿಸುತ್ತಿದೆ. ಕೊಳಚೆ ನೀರಿನ ದುರ್ನಾತದಿಂದಾಗಿ ದಾರಿಹೋಕರು ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಕೊಳೆಗೇರಿ: ಬಡಾವಣೆಯಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಪ್ರಕ್ರಿಯೆ ಹಳ್ಳ ಹಿಡಿದಿದೆ. ನಗರಸಭೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯ ಅಕ್ಕಪಕ್ಕ, ಚರಂಡಿಗಳ ಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಿದ್ದಾರೆ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ.

ಖಾಲಿ ಜಾಗದಲ್ಲಿ ರಾಶಿಯಾಗಿ ಬಿದ್ದಿರುವ ಕಸದ ತೆರವಿಗೆ ಪೌರ ಕಾರ್ಮಿಕರು ಕ್ರಮ ಕೈಗೊಂಡಿಲ್ಲ. ಇದರಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಒಟ್ಟಾರೆ ಮೂಲಸೌಕರ್ಯ ಸಮಸ್ಯೆಯಿಂದ ಸ್ಥಳೀಯರ ಬದುಕು ನರಕ ಸದೃಶವಾಗಿದೆ.

ಸ್ವಚ್ಛತೆಯ ಅರಿವಿಲ್ಲ

ಬಡಾವಣೆ ನಿವಾಸಿಗಳಿಗೆ ಸ್ವಚ್ಛತೆಯ ಅರಿವಿಲ್ಲ. ರಸ್ತೆ ಬದಿಯ ಕಸ ತೆರವುಗೊಳಿಸಿ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಪುನಃ ಕಸ ತಂದು ಸುರಿಯುತ್ತಾರೆ. ಹೀಗಾಗಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಅಮ್ಮೇರಹಳ್ಳಿ ಕೆರೆಯಿಂದ ಬಡಾವಣೆಗೆ ನೀರು ಪೂರೈಸುವ ಪ್ರಯತ್ನ ನಡೆದಿದೆ. ಹೊಸದಾಗಿ ನಿರ್ಮಾಣವಾಗಿರುವ ಯುಜಿಡಿ ಮಾರ್ಗಕ್ಕೆ ಚರಂಡಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುತ್ತೇವೆ 
–ರವೀಂದ್ರ, ನಗರಸಭೆ 12ನೇ ವಾರ್ಡ್‌ ಸದಸ್ಯ

ಬಡಾವಣೆಯ ಚರಂಡಿಯಲ್ಲಿ ಕೊಳಚೆ ನೀರು, ಕಸ ಕಟ್ಟಿಕೊಂಡು ಸಾಕಷ್ಟು ಸಮಸ್ಯೆಯಾಗಿದೆ. ನಗರಸಭೆಗೆ ಅಲೆದು ಚಪ್ಪಲಿ ಸವೆದವೆ ಹೊರತು ಸಮಸ್ಯೆ ಬಗೆಹರಿದಿಲ್ಲ
–ವಾಸುದೇವಾಚಾರಿ, ಹಳೇ ಬಡಾವಣೆ ನಿವಾಸಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.