ADVERTISEMENT

ಎತ್ತಿನಹೊಳೆ ಯೋಜನೆ: ನಾಳೆ ಸಭೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:45 IST
Last Updated 16 ಜುಲೈ 2017, 5:45 IST

ಕೋಲಾರ: ‘ಎತ್ತಿನಹೊಳೆ ಯೋಜನೆ ಅನುಷ್ಠಾನ ಮತ್ತು ಕಾಮಗಾರಿ ಪ್ರಗತಿ ಕುರಿತು ಜನರ ಅನುಮಾನ ಪರಿಹಾರ ಕ್ಕಾಗಿ ತಜ್ಞರಿಂದ ಸಮಗ್ರ ಮಾಹಿತಿ ಒದಗಿಸಲು ನಗರದ ಗೋಕುಲ ಕಲ್ಯಾಣ ಮಂಟಪದಲ್ಲಿ ಜುಲೈ 17ರಂದು ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ’ ಎಂದು ಕೋಚಿಮುಲ್‌ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಯ ತಾಂತ್ರಿಕ ಸಿಬ್ಬಂದಿ ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿ ನಿಧಿಗಳೊಂದಿಗೆ ಸಂವಾದ ನಡೆಸಿ, ಪ್ರಾತ್ಯ ಕ್ಷಿಕೆ ಮೂಲಕ ಮಾಹಿತಿ ನೀಡುತ್ತಾರೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎರಡೂ ಜಿಲ್ಲೆಗಳ ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಡಿಸಿಸಿ ಬ್ಯಾಂಕ್, ಕೃಷಿಕ ಸಮಾಜ, ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ ಸೇರಿದಂತೆ ವಿವಿಧ ಸಂಸ್ಥೆಗಳ ಸದಸ್ಯರು, ರೈತ, ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುತ್ತಾರೆ’ ಎಂದರು.

ADVERTISEMENT

‘ಯೋಜನೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ವರದಪ್ಪ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಎತ್ತಿನಹೊಳೆ ನೀರು ಕೋಲಾರಕ್ಕೆ ಯಾವಾಗ ಬರುತ್ತದೆ, ಯೋಜನೆ ನಿಜಕ್ಕೂ ಅನುಷ್ಠಾನ ಆಗುತ್ತದೆ ಎಂಬ ಅನುಮಾನಗಳ ಪರಿಹಾರಕ್ಕೆ ಮಾಹಿತಿ ಒದಗಿಸುತ್ತಾರೆ’ ಎಂದು ವಿವರಿಸಿದರು.

ಅನುಮತಿ ಸಿಕ್ಕಿದೆ: ‘ಕೆ.ಸಿ.ವ್ಯಾಲಿ ಯೋಜನೆಯ ಕೊಳವೆ ಮಾರ್ಗದ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದೆ. ಕೊಳವೆ ಅಳವಡಿಕೆ ಕಾರ್ಯ ಜುಲೈ 17ರಿಂದ ಆರಂಭವಾಗಲಿದ್ದು, ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಪುನಃ ಅಡ್ಡಿಪಡಿಸಿದರೆ ಇಡೀ ಜಿಲ್ಲೆಯ ಜನರೊಂದಿಗೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕೆ.ಸಿ.ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ನೀರು ಬಂದೇ ಬರುತ್ತದೆ. ಆದರೆ, ಆ ನೀರು ಇಡೀ ಜಿಲ್ಲೆಗೆ ಸಾಕಾಗುವುದಿಲ್ಲ. ಇದರ ಜತೆಗೆ ಎತ್ತಿನಹೊಳೆ ನೀರು ಬಂದರೆ ಜಿಲ್ಲೆಯ ಪರಿಸ್ಥಿತಿ ಸುಧಾರಣೆ ಯಾಗುತ್ತದೆ. ನೀರಿನ ಸಮಸ್ಯೆ ಪರಿ ಹಾರಕ್ಕೆ ಈ ಎರಡೂ ಯೋಜನೆಗಳು ಅತ್ಯಗತ್ಯ’ ಎಂದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ರಾಜಾರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟಸ್ವಾಮಿ, ಪ್ರಗತಿಪರ ರೈತ ಚಂದ್ರಶೇಖರ್  ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.