ADVERTISEMENT

ಎಸ್‍ಎಫ್‍ಐ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 7:22 IST
Last Updated 22 ಡಿಸೆಂಬರ್ 2017, 7:22 IST

ಮುಳಬಾಗಿಲು: ವಿಜಯಪುರದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಸಂಘಟನೆಯ ನೇತೃತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕಿಯ ಕಾಲೇಜು ವಿದ್ಯಾರ್ಥಿನಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಅಮಾಯಕ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾರ್ಯಕರ್ತರು ದೂರಿದರು.

‘ವಿಜಯಪುರದ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡನೀಯವಾದದ್ದು. ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಎದುರಾಗಿದೆ’ ಎಂದು ಎಸ್‍ಎಫ್‍ಐ ಜಿಲ್ಲಾ ಕಾರ್ಯದರ್ಶಿ ಅಂಬ್ಲಿಕಲ್ ಎನ್.ಶಿವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಂಟಿಯಾಗಿ ಮಹಿಳೆ ಸಂಚರಿಸಲು ಭಯದ ವಾತಾವರಣ ನಿರ್ಮಾಣ ಸೃಷ್ಟಿಯಾಗಿದ್ದು, ಸರ್ಕಾರ ತಲೆ ತಗ್ಗಿಸುವಂತಾಗಿದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕಾನೂನು ಸರಿಯಾದ ರೀತಿಯಲ್ಲಿ ಪಾಲನೆಯಾಗಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಇದರಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ ಕಾಲೇಜು ತರಗತಿ ಕೊಠಡಿ, ಶಾಲಾ ಆವರಣ, ಮೈದಾನ ಸೇರಿದಂತೆ ಹಲವೆಡೆಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಪೊಲೀಸ್ ಬೀಟ್, ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಎಸ್‍ಎಫ್‍ಐ ಬಾಲಕಿಯ ಕಾಲೇಜು ಅಧ್ಯಕ್ಷೆ ಸಬೀನಾ ದೂರಿದರು.

ಪ್ರತಿಭಟನಾ ಮೆರವಣಿಗೆಯನ್ನು ನೇತಾಜಿ ಕ್ರೀಡಾಂಗಣದಿಂದ ಕೆ.ಇ.ಬಿ ವೃತ್ತ, ಸಿವಿಲ್ ನ್ಯಾಯಾಲಯ ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮೂಲಕ ತಾಲ್ಲೂಕು ಕಚೇರಿ ಆವರಣ ತಲುಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಬಿ.ಎನ್.ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಎಸ್‍ಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಶಶಿಕುಮಾರ್, ಬಾಕಲಿಯರ ಎಸ್‍ಎಫ್‍ಐ ಕಾರ್ಯದರ್ಶಿ ಸಂಧ್ಯಾ, ತಾಲ್ಲೂಕು ಮುಖಂಡರಾದ ರಮ್ಯಾ, ಮಾಲಾಶ್ರೀ, ಅಂಕಿತಾ, ಸುಮಾ, ರಮ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿವಾಸ್, ರಂಜಿತ್, ಗಂಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.