ADVERTISEMENT

ಐಎಎಸ್ ಅಧಿಕಾರಿಗಳಂತೆ ವರ್ತಿಸುತ್ತಾರೆ...

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 5:47 IST
Last Updated 16 ಜುಲೈ 2017, 5:47 IST

ಕೋಲಾರ: ‘ವಿದ್ಯುತ್‌ ಸಮಸ್ಯೆ ಹೇಳಲು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಮತ್ತೆ ಕೆಲವರು ಬೇಜವಾಬ್ದಾರಿಯುತವಾಗಿ ನಡೆದು ಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಕಾರ್ಯಗಳು ವಿಳಂಬವಾಗುತ್ತಿವೆ’ ಎಂದು ಸಾರ್ವಜನಿಕರು ನಗರದಲ್ಲಿ ಶನಿವಾರ ನಡೆದ ಬೆಸ್ಕಾಂ ಕುಂದು ಕೊರತೆ ಸಭೆಯಲ್ಲಿ ಅಳಲು ತೋಡಿಕೊಂಡರು.

ಜಿಲ್ಲೆ ವ್ಯಾಪ್ತಿಯ ಕೋಲಾರ ಗ್ರಾಮೀಣ ಮತ್ತು ನಗರ ಉಪ- ವಿಭಾಗದಲ್ಲಿನ ವಿದ್ಯುತ್‌ ಸೇವೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಸ್ಕಾಂ ವತಿಯಿಂದ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ, ‘ನಿರಂತರ ಜ್ಯೋತಿ ಯೋಜನೆ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ’ ಎಂದು ದೂರಿದರು.

‘ನಿರಂತರ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಕಂಬ ಹಾಕುವ ಗುತ್ತಿಗೆಯನ್ನು ಆಂಧ್ರಪ್ರದೇಶದವರಿಗೆ ನೀಡಿದ್ದು, ಅವರಿಗೆ ಕಂಬಗಳನ್ನು ಎಲ್ಲಿ ಮತ್ತು ಯಾವ ರೀತಿ ಹಾಕಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ. ಅವರು ಬೇಕಾಬಿಟ್ಟಿ ಕೆಲಸ ಮಾಡಿ ಹೋಗುತ್ತಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಗಾಳಿ-ಮಳೆಗೆ ಕಂಬಗಳು ಬೀಳುತ್ತಿವೆ. ಟ್ರಾಕ್ಟರ್‌ನಲ್ಲಿ ಗುಂಡಿ ತೋಡಿ ಕಂಬ ಹಾಕಿರುವುದರಿಂದ ಇಂತಹ ಅನಾಹುತ ನಡೆಯುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘ನರೇಗಾ ಯೋಜನೆಯಡಿ ಸ್ಥಳೀ ಯರಿಗೆ ಅವಕಾಶ ನೀಡಿದ್ದರೆ ಗುಣ ಮಟ್ಟದ ಕೆಲಸ ಮಾಡುತ್ತಿದ್ದರು. ಆದರೆ, ಆಂಧ್ರಪ್ರದೇಶದ ಗುತ್ತಿಗೆದಾರರ ಕಾಮಗಾರಿ ಕಳಪೆಯಾಗಿದ್ದರೂ ಕೇಳುವವರಿಲ್ಲ. ಅಧಿಕಾರಿಗಳು ಯೋಜನೆಯನ್ನು ಆಂಧ್ರದವರಿಗೆ ಗಿರವಿ ಇಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿಗಳು, ‘ನಿರಂತರ ಜ್ಯೋತಿ ಯೋಜನೆಯ ಟೆಂಡರ್‌ ಪ್ರಕ್ರಿಯೆ ರಾಜ್ಯ ಮಟ್ಟದಲ್ಲಿ ನಡೆದಿದ್ದು, ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಸಿಬ್ಬಂದಿ  ನೇಮಿಸಲಾಗಿದೆ’ ಎಂದು ಹೇಳಿದರು.

ದರ್ಪ ತೋರುತ್ತಾರೆ: ‘ಟಮಕ ಸ್ಟೇಷನ್ ಅಧಿಕಾರಿಗಳಿಗೆ ಕರೆ ಮಾಡಿದರೆ ಸಮರ್ಪಕ ಉತ್ತರ ನೀಡುವುದಿಲ್ಲ. ಅಧಿಕಾರಿಗಳು ಕನಿಷ್ಠ ತಮ್ಮ ಹೆಸರು ಹೇಳುವುದಿಲ್ಲ. ರೈತರಿಗೆ ದರ್ಪ ತೋರುವ ಅವರು ಐಎಎಸ್ ಅಧಿಕಾರಿಗಳಂತೆ ವರ್ತಿಸುತ್ತಾರೆ. ಜನರಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಮೊಬೈಲ್‌ ಸಂಖ್ಯೆ ಯಾಕೆ ನೀಡಬೇಕು’ ಎಂದು ತಾಲ್ಲೂಕಿನ ಹುತ್ತೂರು ಗ್ರಾಮದ ಚೌಡಪ್ಪ ಪ್ರಶ್ನಿಸಿದರು.

ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಾಸುದೇವ್ ಮಾತನಾಡಿ, ‘ವಿದ್ಯುತ್‌ನಿಂದಲೇ ರೈತರ ಜೀವನ ನಡೆಯಬೇಕು. ವಿದ್ಯುತ್‌ ಸಮಸ್ಯೆ ಸಂಬಂಧ ರೈತರು ಕರೆ ಮಾಡಿದಾಗ ಸೌಜನ್ಯಯುತವಾಗಿ ಮಾಹಿತಿ ಕೊಡಲು ತೊಂದರೆ ಏನು’ ಎಂದು ಟಮಕ ಸ್ಟೇಷನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಜೋತು ಬಿದ್ದಿವೆ: ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಗಣೇಶ್‌ಗೌಡ ಮಾತನಾಡಿ, ‘ಕೋಲಾರ–ಬೇತ ಮಂಗಲ ಮುಖ್ಯರಸ್ತೆಯ ಚಾಮರಹಳ್ಳಿ ಬಳಿ ಹಾಗೂ ಅಗ್ರಹಾರ ಸೋಮರಸನಹಳ್ಳಿಯ ಶಾಲೆ ಪಕ್ಕ ವಿದ್ಯುತ್ ತಂತಿಗಳು ಕೈಗೆಟುಕುವಂತೆ ಜೋತು ಬಿದ್ದಿವೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ವಿದ್ಯುತ್ ನಿಲುಗಡೆ ಸಂಬಂಧ ಅಧಿಕಾರಿಗಳು ಮುಂಚಿತವಾಗಿ ಪ್ರಕಟಣೆ ನೀಡುವುದಿಲ್ಲ. ಕನಿಷ್ಠ ಒಂದು ವಾರ ಮುಂಚೆ ಮಾಹಿತಿ ನೀಡಿದರೆ ಅನುಕೂಲ ವಾಗುತ್ತದೆ. ಕೈಗಾರಿಕೆಯವರು ಕಾರ್ಮಿ ಕರಿಗೆ ರಜೆ ನೀಡಲು ಸಹಕಾರಿಯಾ ಗಲಿದೆ’ ಎಂದು ವ್ಯಾಪಾರಿ ಮನೋಹರ್‌ ಮನವಿ ಮಾಡಿದರು.

‘ಕೋಲಾರ ನಗರದಲ್ಲಿನ ಸಾಕಷ್ಟು ವಿದ್ಯುತ್‌ ಕಂಬಗಳು ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿವೆ. ಟ್ರಾನ್ಸ್‌ಫಾರ್ಮರ್‌ಗಳು ಇರುವ ಕಡೆ ಅಪಾಯವೆಂಬ ಸೂಚನಾ ಫಲಕಗಳನ್ನು ಹಾಕಿಲ್ಲ. ನಗರದ ಪೇಟೆಚಾಮನಹಳ್ಳಿ ಮತ್ತು ಗಲ್‌ಪೇಟೆ ಬಡಾವಣೆಯಲ್ಲಿ ವಿದ್ಯುತ್‌ ಬಿಲ್‌ ಪಾವತಿ ಕೇಂದ್ರ ಆರಂಭಿಸಬೇಕು’ ಎಂದು ಅವರು ಹೇಳಿದರು.

ಶೀಘ್ರವೇ ಬದಲಿಸುತ್ತೇವೆ: ಇದಕ್ಕೆ ಸ್ಪಂದಿ ಸಿದ ಬೆಸ್ಕಾಂ ಅಧಿಕಾರಿಗಳು, ‘ಶಿಥಿಲ ಕಂಬಗಳನ್ನು ಶೀಘ್ರವೇ ಬದಲಿಸುತ್ತೇವೆ ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಬಳಿ ಅಪಾಯದ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ, ಸುತ್ತಲೂ ತಂತಿ ಬೇಲಿ ಹಾಕು ತ್ತೇವೆ’ ಎಂದು ಭರವಸೆ ನೀಡಿದರು.

‘ಬಿಲ್‌ ಪಾವತಿ ಕೇಂದ್ರ ತೆರೆಯಲು ಆ ವ್ಯಾಪ್ತಿಯಲ್ಲಿ ಉದ್ದೇಶಿತ ಗುರಿಯಷ್ಟು ಬಿಲ್‌ ವಸೂಲಿ ಆಗಲೇಬೇಕು. ಹೀಗಾಗಿ ಹೊಸ ಕೇಂದ್ರಗಳನ್ನು ತೆರೆಯುತ್ತಿಲ್ಲ. ಹೊಸ ಸಂಪರ್ಕಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 15 ದಿನಗಳಲ್ಲಿ ಈ ಹೊಸ ಪದ್ಧತಿ ಜಾರಿಯಾಗಲಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ಬೆಸ್ಕಾಂ ವಿಭಾಗೀಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಜಯಕುಮಾರ್, ಕೋಲಾರ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಾಸು ದೇವ್, ಹಿರಿಯ ಸಹಾಯಕ ಅಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.