ADVERTISEMENT

ಕಲಾವಿದರ ಸಮೀಕ್ಷೆಗೆ ಸಹಕಾರ ಅಗತ್ಯ: ಪಿಚ್ಚಳ್ಳಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 10:06 IST
Last Updated 31 ಜುಲೈ 2014, 10:06 IST

ಕೋಲಾರ: ಕಲಾವಿದರ ಸಮೀಕ್ಷೆಗೆ ಗ್ರಾಮ ಪಂಚಾಯತಿಯ ಸಾಕ್ಷರತಾ ಪ್ರೇರಕರು ಹೆಚ್ಚಿನ ಉತ್ಸಾಹ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌ ಹೇಳಿದರು.

ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಲೋಕಶಿಕ್ಷಣ ಸಮಿತಿಯ ಪ್ರೇರಕರ ಸಭೆಯಲ್ಲಿ ಮಾತನಾಡಿದ ಅವರು, ಬೆಳಕಿಗೆ ಬಾರದ ಕಲಾವಿದರನ್ನು ಪತ್ತೆ ಹಚುವುದು ಮತ್ತು ಎಲ್ಲ ಕಲಾವಿದರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುವ ಸಲುವಾಗಿ ಅಕಾಡೆಮಿ ಸಮೀಕ್ಷೆ ಹಮ್ಮಿಕೊಂಡಿದೆ. ಪ್ರೇರಕರು ಕಲಾವಿದರ ಕುರಿತು ಪ್ರೀತಿ ಮತ್ತು ಕಾಳಜಿಯಿಂದ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದರು.

ಕಲಾವಿದರ ಭಾವಚಿತ್ರ, ಮಾತೃಭಾಷೆ, ಕಲೆಯ ಭಾಷೆ, ಕಲಾ ಪ್ರಕಾರ, ಅವರ ಗುರುಗಳು, ಕಲಾ ತಂಡವಾದ ನೋಂದಣಿ ಸಂಖ್ಯೆ, ತಂಡದ ಕಲಾವಿದರ ಸಂಖ್ಯೆ, ನೀಡಿದ ಕಾರ್ಯಕ್ರಮಗಳ ಸಂಖ್ಯೆ, ಮಾಸಾಶನದ ಎಲ್ಲ ವಿವರ, ವಾಸದ ಮನೆಯ ವಿವರ, ವಾಹನ ಸೇರಿದಂತೆ ಹೊಂದಿರುವ ಸೌಕರ್ಯಗಳ ವಿವರವನ್ನು ಪ್ರೇರಕರು ಸಂಗ್ರಹಿಸಿ ನೀಡಬೇಕು. ಅಕಾಡೆಮಿ  ನೀಡಿದ ನಿಗದಿತ ನಮೂನೆಯಲ್ಲಿ ಮಾಹಿತಿ­ಭರ್ತಿ ಮಾಡಿ ಸಲ್ಲಿಸಬೇಕು ಎಂದು ಸೂಚಿಸಿದರು.

ಪ್ರತಿಯೊಬ್ಬ ಕಲಾವಿದರೂ ಅಕಾಡೆಮಿಗೆ ಮುಖ್ಯ. ಹೀಗಾಗಿ ತಂಡವಿದ್ದರೆ, ಪ್ರತಿಯೊಬ್ಬ ಕಲಾವಿದರ ವಿವರವನ್ನೂ ಪ್ರತ್ಯೇಕವಾಗಿ ದಾಖಲಿಸುವುದು ಕಡ್ಡಾಯ ಎಂದರು.

ಸಮೀಕ್ಷೆಗೆ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಬೇಕೆಂದೇನಿಲ್ಲ. ಗ್ರಾಮದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲೆ ಸಿಬ್ಬಂದಿ, ಪಂಚಾಯತಿ ಸದಸ್ಯರು, ಸಿಬ್ಬಂದಿಗೆ ಪರಿಚಯವಿರುವ ಕಲಾವಿದರ ಮಾಹಿತಿ ಸಂಗ್ರಹಿಸಿ ಎಂದರು.

ಸಮಿತಿ ಕಾರ್ಯಕ್ರಮ ಸಹಾಯಕ ಡಿ.ಆರ್‌.ರಾಜಪ್ಪ, ತಾಲ್ಲೂಕು ಸಂಯೋಜಕ­ರಾದ ಅಶ್ವಥ್‌ ಮತ್ತು ಶ್ರೀರಾಂ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT