ADVERTISEMENT

ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿ

ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 10:37 IST
Last Updated 1 ಆಗಸ್ಟ್ 2015, 10:37 IST

ಕೋಲಾರ: ‘ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ವಿಳಂಬ ಮಾಡಬಾರದು. ಕೈಗಾರಿಕಾ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದರೆ ಹೂಡಿಕೆದಾರರು ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುತ್ತಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ತಿಳಿಸಿದರು.

ಇಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ 48ನೇ ಏಕಗವಾಕ್ಷಿ ಸಭೆಯಲ್ಲಿ ಅವರು ಮಾತನಾಡಿದರು. ಕೈಗಾರಿಕೆಗಳ ಸ್ಥಾಪನೆ ವೇಳೆ ಭೂಪರಿವರ್ತನೆ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ಹೂಡಿಕೆದಾರರಿಗೆ ತೊಂದರೆ ಕೊಡಬಾರದು. ರಾಜ್ಯ ಸರ್ಕಾರ ಉದ್ದಿಮೆದಾರರನ್ನು ಸೆಳೆಯಲು ನ.23ರಿಂದ 25ರವರೆಗೆ ಹೂಡಿಕೆದಾರರ ಸಮಾವೇಶ ನಡೆಸುತ್ತಿದೆ. ಅದೇ ರೀತಿ ಜಿಲ್ಲೆಯಲ್ಲೂ ಹೂಡಿಕೆದಾರರ ಸಮಾವೇಶ ನಡೆಸಲು ಕಾರ್ಯಯೋಜನೆ ರೂಪಿಸಿ ಎಂದು ಸೂಚಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಆಧುನೀಕರಣ ತಾಂತ್ರಿಕ ತರಬೇತಿ ಯೋಜನೆಯಡಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ. ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ. ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪ್ರತಿ ತಾಲ್ಲೂಕಿಗೆ ಇಬ್ಬರು ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವೆಂಕಟೇಶ್‌ ಮಾತನಾಡಿ, ಎಸ್‌ಸಿಪಿ ಯೋಜನೆಯಡಿ 50 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಟಿಎಸ್‌ಪಿ ಯೋಜನೆಗೆ ಅರ್ಜಿಗಳು ಬಂದಿಲ್ಲ. ಈ ಎರಡೂ ಯೋಜನೆಗಳಿಂದ 50 ಭೌತಿಕ ಗುರಿ ಹೊಂದಲಾಗಿದೆ. 60:40ರ ಅನುಪಾತದಲ್ಲಿ ಬ್ಯಾಂಕ್‌ನಿಂದ ಘಟಕಗಳಿಗೆ ಸಾಲ ನೀಡಲು ಕೇಂದ್ರ ಕಚೇರಿಯ ಅನುಮತಿ ಕೋರಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲು, ರೋಗಗ್ರಸ್ಥ ಘಟಕಗಳ ಪುನಶ್ಚೇತನಕ್ಕೆ ಹಣಕಾಸು ಸಂಸ್ಥೆಗಳಿಂದ ಪ್ರಸ್ತಾವ ಸಲ್ಲಿಸಲು ಮತ್ತು ಕೈಗಾರಿಕೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಪಡೆದು ಡಾ.ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ ವಾರ್ಷಿಕ ಲಾಭಾಂಶದಲ್ಲಿ ಶೇ 2ರಷ್ಟನ್ನು ಸಾಮಾಜಿಕ ಜವಾಬ್ದಾರಿ ಯೋಜನೆಗೆ ಖರ್ಚು ಮಾಡುವಂತೆ ಉದ್ದಿಮೆಗಳಿಗೆ ಸೂಚನೆ ನೀಡಲು ತೀರ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಎ.ಕೋರವಾರ, ಕೇಂದ್ರದ ವಿಸ್ತರಣಾಧಿಕಾರಿ ಡಿ.ರವಿಚಂದ್ರ, ಲೀಡ್ ಬ್ಯಾಂಕ್, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನರಸಾಪುರ, ಮಾಲೂರು ಹಾಗೂ ವೇಮಗಲ್‌ ಸೇರಿದಂತೆ ಜಿಲ್ಲೆಯ ಕೈಗಾರಿಕಾ ವಲಯಕ್ಕೆ ಸಮರ್ಪಕವಾಗಿ ವಿದ್ಯುತ್‌ ಪೂರೈಸಬೇಕು. - ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.