ADVERTISEMENT

ಚರಂಡಿ ಅವ್ಯವಸ್ಥೆ: ಸಾಂಕ್ರಾಮಿಕ ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 8:44 IST
Last Updated 2 ಸೆಪ್ಟೆಂಬರ್ 2017, 8:44 IST

ಮುಳಬಾಗಿಲು: ನಗರದ ಕುರುಬರಪೇಟೆ ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದ್ದು, ಬಡಾವಣೆಯ ರಸ್ತೆಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಬಡಾವಣೆಯು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಸ್ಥಳೀಯರ ಬವಣೆ ಹೇಳತೀರದು.

ಬಹುಪಾಲು ಕಚ್ಚಾ ರಸ್ತೆಗಳಾಗಿವೆ. ತುಂತುರು ಮಳೆ ಬಂದರೂ ರಾಡಿಯಾಗುತ್ತವೆ. ಮತ್ತೊಂದೆಡೆ ನಗರಸಭೆ ಪೌರ ಕಾರ್ಮಿಕರು ಮನೆಗಳ ಬಳಿ ಬಂದು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು ರಸ್ತೆ ಹಾಗೂ ಚರಂಡಿಗಳ ಬದಿಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ. ತ್ಯಾಜ್ಯದ ಜತೆ ಚರಂಡಿ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಜನ ಮೂಗಿ ಮುಚ್ಚಿಕೊಂಡು ಓಡಾಡುವಂತಾಗಿದೆ.

ರಸ್ತೆಗಳಿಗೆ ಡಾಂಬರು ಹಾಕದ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುವ ದೃಶ್ಯ ಕಂಡುಬರುತ್ತದೆ. ತ್ಯಾಜ್ಯದ ರಾಶಿ ಹಾಗೂ ಚರಂಡಿಯ ಕೊಳಚೆ ನೀರಿನಿಂದಾಗಿ ಹಂದಿ. ಬೀದಿ ನಾಯಿ, ಸೊಳ್ಳೆ ಕಾಟ ಹೆಚ್ಚಿದೆ. ಈಗಾಗಲೇ ಹಲವು ಸ್ಥಳೀಯರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

ADVERTISEMENT

‘ಪೌರ ಕಾರ್ಮಿಕರು ಕಸ ಸಂಗ್ರಹಣೆಗೆ ಮನೆ ಬಳಿ ಬರುವುದೇ ಇಲ್ಲ. ರಸ್ತೆಗಳಿಗೆ ಡಾಂಬರು ಹಾಕುವಂತೆ ನಗರಸಭೆಗೆ ಹಲವಾರು ಬಾರಿ ದೂರು ಕೊಟ್ಟಿದ್ದೇವೆ. ಆದರೆ, ಅಧಿಕಾರಿಗಳು ಸೌಜನ್ಯಕ್ಕೂ ಬಡಾವಣೆಗೆ ಭೇಟಿ ಕೊಟ್ಟಿಲ್ಲ’ ಎಂದು ಸ್ಥಳೀಯರು ದೂರಿದರು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬಡಾವಣೆಯ ಮೂಲಸೌಕರ್ಯ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆಗೆ ಬೀಗ ಜಡಿದು ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.