ADVERTISEMENT

ಚಿಂತನ ಮಂಥನಕ್ಕೆ ಒಳಪಡುವ ಶಿಕ್ಷಣ ನೀಡಿ

ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 10:36 IST
Last Updated 11 ಫೆಬ್ರುವರಿ 2017, 10:36 IST
ಕೋಲಾರ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ಕಾರ್ಯಕ್ರಮದಲ್ಲಿ ಕೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ಮಾತನಾಡಿದರು
ಕೋಲಾರ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ಕಾರ್ಯಕ್ರಮದಲ್ಲಿ ಕೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ಮಾತನಾಡಿದರು   

ಕೋಲಾರ: ‘ವಿದ್ಯಾರ್ಥಿಗಳಿಗೆ ಚಿಂತನ ಮಂಥನಕ್ಕೆ ಒಳಪಡುವ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ತಿಳಿಸಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಥಮಿಕ ಹಂತ ವಿದ್ಯಾರ್ಥಿಗಳಿಗೆ ಕಲಿಕೆಯ ಹಂತವಾಗಿದೆ. ವಿದ್ಯಾರ್ಥಿಯಲ್ಲಿ ಸ್ಪರ್ಧಾ ಮನೋಭಾವದ ಜತೆಗೆ ಪ್ರಯೋಗಾತ್ಮಕ ಮತ್ತು ಚಿಂತನ ಮಂಥನಕ್ಕೆ ಒಳಪಡುವ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದರು.

ಪಠ್ಯ, ಸಹಪಠ್ಯ, ಕ್ರೀಡೆ, ಸಂಗೀತದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ವಿಜ್ಞಾನ, ಗಣಿತ ವಿಷಯಗಳು ವಿದ್ಯಾರ್ಥಿಗೆ ಆಕರ್ಷಕ ಕಲಿಕಾ ವಿಷಯಗಳಾಗಿದ್ದು, ಈ ಸಂಬಂಧ ಕಲಿಕೆಯ ಜತೆಯಲ್ಲಿ ವಿದ್ಯಾರ್ಥಿಯ ಆಲೋಚನೆಗೆ ಗ್ರಾಸ ಮತ್ತು ಚರ್ಚೆಗೆ ಅವಕಾಶ ಕಲ್ಪಿಸುವ ಪ್ರಯೋಗಗಳು ವಿದ್ಯಾರ್ಥಿಯ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.

ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಕಲಿಕೆ ದೃಢವಾಗಲು ಪ್ರಯೋಗಗಳು ಪೂರಕವಾಗಿವೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಬೋಧನಾ ಬಾಂಧವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜ್ಞಾನವನ್ನು ಹೆಚ್ಚಿಸಬೇಕು. ಈಗಾಗಲೇ ತಾಲ್ಲೂಕಿನ ನಾಲ್ಕು ಶಾಲೆಗಳನ್ನು ಆವಿಷ್ಕಾರ್ ಅಭಿಯಾನಕ್ಕೆ ಆಯ್ಕೆ ಮಾಡಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕತೆಯ ಚಿಂತನೆ ಆರಂಭವಾಗಿದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಸಹಕಾರ ನೀಡಬೇಕು ಎಂದರು.

ಶಿಕ್ಷಣ ಸಂಯೋಜಕ ಪಿ.ಗೋಪಿಕೃಷ್ಣನ್ ಮಾತನಾಡಿ, ‘ವಿದ್ಯಾರ್ಥಿಗಳ ಭಾವನೆಗಳಿಗೆ ಸ್ಪಂದಿಸುವ ಮತ್ತು ಅವರಲ್ಲಿ ಹುದುಗಿರುವ ಸಂಶೋಧನೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಶಿಕ್ಷಕರು ಮಾಡಬೇಕು. ವಿಜ್ಞಾನ ಪ್ರವಾಸ ಅಧ್ಯಯನಗಳು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಂತಾಗಬೇಕು’ ಎಂದರು.

‘ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನ ವಿಚಾರಗಳು ವಿದ್ಯಾರ್ಥಿಗಳ ಗುಣಮಟ್ಟ ಕಲಿಕೆಗೆ ಪೂರಕವಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಕಲಿಕೆಯ ಹಸಿವನ್ನು ಹೊಂದಿ ಕಲಿಯಬೇಕು’ ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ತಿಳಿಸಿದರು.

ಶಿಕ್ಷಕರಾದ ಕೃಷ್ಣಪ್ಪ, ಗೋವಿಂದಪ್ಪ, ಮುನಿಯಪ್ಪ, ಮಂಜುಳಾ,ಮಮತಾ, ಎಂ.ಆರ್.ಮೀನಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.