ADVERTISEMENT

ತ್ಯಾಜ್ಯದ ತೊಟ್ಟಿಯಾದ ಪುಷ್ಕರಣಿ

ವೇಣುಗೋಪಾಲಸ್ವಾಮಿ ದೇವಸ್ಥಾನ: ನಿರ್ವಹಣೆಗೆ ಮುಂದಾಗದ ನಗರಸಭೆ ಅಧಿಕಾರಿಗಳು

ಜೆ.ಆರ್.ಗಿರೀಶ್
Published 17 ಜುಲೈ 2017, 6:27 IST
Last Updated 17 ಜುಲೈ 2017, 6:27 IST
ನಿರ್ವಹಣೆ ಇಲ್ಲದೆ ಹಾಳಾಗಿರುವ ವೇಣುಗೋಪಾಲಸ್ವಾಮಿ ಪುಷ್ಕರಣಿ.
ನಿರ್ವಹಣೆ ಇಲ್ಲದೆ ಹಾಳಾಗಿರುವ ವೇಣುಗೋಪಾಲಸ್ವಾಮಿ ಪುಷ್ಕರಣಿ.   

ಕೋಲಾರ: ನಗರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಪುಷ್ಕರಣಿಯು ಸೂಕ್ತ ನಿರ್ವಹಣೆ ಇಲ್ಲದೆ ತ್ಯಾಜ್ಯ ಸಂಗ್ರಹಣೆಯ ತೊಟ್ಟಿಯಾಗಿದೆ.

ಟೇಕಲ್‌ ರಸ್ತೆಗೆ ಹೊಂದಿಕೊಂಡಂತೆ ಇರುವ ಪುಷ್ಕರಣಿಯಲ್ಲಿ ಅಕ್ಕಪಕ್ಕದ ಬಡಾವಣೆಗಳ ನಿವಾಸಿಗಳು, ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್‌ಗಳ ಕೆಲಸಗಾರರು ಕಸವನ್ನು ವಿಲೇವಾರಿ ಮಾಡುತ್ತಿದ್ದಾರೆ. ಪುಷ್ಕರಣಿ ದಿನದಿಂದ ದಿನಕ್ಕೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮತ್ತೊಂದೆಡೆ ಕೊಳಚೆ ನೀರು ಸೇರಿ ಹೂಳಿನ ಪ್ರಮಾಣ ಹೆಚ್ಚುತ್ತಿದೆ.

ನಗರವು ಈ ಹಿಂದೆ ಚೋಳರ ಆಳ್ವಿಕೆಗೆ ಒಳಪಟ್ಟಿದ್ದ ವೇಳೆ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಕೂಗಳತೆ ದೂರದಲ್ಲೇ ಪುಷ್ಕರಣಿ ನಿರ್ಮಾಣ ಮಾಡಲಾಗಿತ್ತು. ದೇವಸ್ಥಾನ ಈಗಲೂ ಸುಸ್ಥಿತಿಯಲ್ಲಿದೆ. ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಆದರೆ, ಪುಷ್ಕರಣಿ ತುಂಬಾ ಗಿಡಗಂಟೆಗಳು ಬೆಳೆದಿವೆ. ಕಲ್ಲಿನ ಮೆಟ್ಟಿಲುಗಳು ಶಿಥಿಲಗೊಂಡಿವೆ.

ADVERTISEMENT

ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದರೂ ಪುಷ್ಕರಣಿಯಲ್ಲಿ ಮಾತ್ರ ಜೀವ ಸೆಲೆ ಬತ್ತಿಲ್ಲ.  ಅಂತರ್ಜಲ ಉಕ್ಕುತ್ತಿದೆ. ಸುಮಾರು 20 ಅಡಿ ನೀರಿದೆ. ಆದರೆ, ಕೊಳಚೆ ನೀರಿನಿಂದ ಪುಷ್ಕರಣಿ ನೀರು ಮಲೀನಗೊಂಡಿದೆ. ನೀರಿನಲ್ಲಿ ಪಾಚಿ ಹಾಗೂ ಗಿಡಗಳು ಬೆಳೆದಿವೆ.

ಪುನಶ್ಚೇತನ: ಎರಡು ವರ್ಷಗಳ ಹಿಂದೆ ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಸುಮಾರು ₹ 28 ಲಕ್ಷ ವೆಚ್ಚದಲ್ಲಿ ಪುಷ್ಕರಣಿಯ ಪುನಶ್ಚೇತನ ಕಾರ್ಯ ನಡೆದಿತ್ತು. ಕಾಮಗಾರಿ ಟೆಂ ಡರ್‌ ಪಡೆದಿದ್ದ ಗುತ್ತಿಗೆದಾರರು ಹೂಳು ತೆಗೆದು, ಸುತ್ತಲೂ ಎರಡು ಬದಿಗೆ ಮಾತ್ರ ಸಿಮೆಂಟ್‌ ಮತ್ತು ಕಬ್ಬಿಣದ ತಡೆಗೋಡೆ ಅಳವಡಿಸಿ ಕೈತೊಳೆದುಕೊಂಡಿದ್ದಾರೆ.

ನಂತರ ನಗರಸಭೆಯು ಪುಷ್ಕರಣಿಯ ನಿರ್ವಹಣೆ ಗೋಜಿಗೆ ಹೋಗಿಲ್ಲ. ಮೆಟ್ಟಿಲುಗಳು ಹಾಗೂ ಮೇಲ್ಭಾಗದಲ್ಲಿ ಕಸ ರಾಶಿಯಾಗಿ ಬಿದ್ದಿದೆ. ಸ್ವಚ್ಛತೆ ಮಾಯವಾಗಿದೆ. ತ್ಯಾಜ್ಯದ ಜತೆ ಕೊಳಚೆ ನೀರು ಸೇರಿ ಕಸ ಕೊಳೆತು ದುರ್ನಾತ ಬೀರುತ್ತಿದೆ. ಸಾರ್ವಜನಿಕರು ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಸುರಕ್ಷತೆ ಮರೀಚಿಕೆ: ನಗರಸಭೆಯು ಪುಷ್ಕರಣಿ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಪುಷ್ಕರಣಿ ಆಳವಾಗಿದೆ ಎಂಬ ಸೂಚನಾ ಫಲಕಗಳನ್ನು ಅಳವ ಡಿಸಿಲ್ಲ. ಇನ್ನು ಕಬ್ಬಿಣದ ತಡೆಗೋಡೆಯ ಬಾಗಿಲು ತೆರೆದು ಬಿಟ್ಟಿದ್ದು, ಈಜಲು ಹೋಗಿ  ಮೂರ್‌್ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇಂತಹ ಅವ ಘಡಗಳು ಪದೇಪದೇ ಸಂಭವಿಸುತ್ತಿ ದ್ದರೂ ನಗರಸಭೆ ಅಧಿಕಾರಿಗಳು  ಸುರಕ್ಷತಾ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ.

ಜಾಗ ಒತ್ತುವರಿ: ಪುಷ್ಕರಣಿಯ ಅಕ್ಕ ಪಕ್ಕದ ಖಾಲಿ ಜಾಗ ನಗರಸಭೆಗೆ ಸೇರಿದೆ. ಹಲವೆಡೆ ಈ ಜಾಗ ಒತ್ತುವರಿಯಾಗಿದೆ. ಖಾಸಗಿ ವ್ಯಕ್ತಿಗಳು ಈ ಜಾಗದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಮತ್ತೆ ಕೆಲವರು ಹೋಟೆಲ್‌ ನಡೆಸುತ್ತಿದ್ದಾರೆ. ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರು ಜಿಲ್ಲಾ ಧಿಕಾರಿಯಾಗಿದ್ದ ಸಂದರ್ಭದಲ್ಲಿ ಪುಷ್ಕ ರಣಿ ಸುತ್ತಮುತ್ತಲಿನ ಒತ್ತುವರಿ ತೆರವು ಗೊಳಿಸುವಂತೆ ಆದೇಶಿಸಿದ್ದರು. ಅಷ್ಟರಲ್ಲಿ ಅವರ ವರ್ಗಾವಣೆ ಯಾಗಿದ್ದರಿಂದ ಆದೇಶ ಜಾರಿಯಾಗದೆ ಕಡತಕ್ಕೆ ಸೀಮಿತ ವಾಯಿತು. ಪುಷ್ಕರಣಿಯು ಹೆಚ್ಚಿನ ಜನ ಸಂದಣಿಯ ವಾಣಿಜ್ಯ ಪ್ರದೇಶದಲ್ಲಿದ್ದು, ಈಗಲೂ ಸುತ್ತಮುತ್ತಲಿನ ಜಾಗದ ಒತ್ತುವರಿ ಪ್ರಯತ್ನಗಳು ನಡೆದಿವೆ. ಭೂಗಳ್ಳರು ಒಳಗೊಳಗೆ ಜಾಗ ಕಬಳಿಸುವ ಸಂಚು ಮಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಪುಷ್ಕರಣಿ ಹಾಗೂ ಅದರ ಸುತ್ತಲಿನ ಜಾಗ ಸಂಪೂರ್ಣ ಒತ್ತುವರಿಯಾಗಿ ಇತಿಹಾಸದ ಪುಟ ಸೇರಲಿವೆ.

**

ಪುಷ್ಕರಣಿ ನಿರ್ವಹಣೆ ಮಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ. ಭೂಗಳ್ಳರು  ಪುಷ್ಕರಣಿಯ ಅಕ್ಕಪಕ್ಕದ ಜಾಗ ಒತ್ತುವರಿ ಮಾಡಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.
–ಪಿ.ವಿ.ರಾಮಕೃಷ್ಣ, ಪಿ.ಸಿ.ಬಡಾವಣೆ ವಾಸಿ

**

ನಗರೋತ್ಥಾನ ಯೋಜನೆಯ 3ರ ಅಡಿ ಮೂರು ಪುಷ್ಕರಣಿಗಳ ಪುನಶ್ಚೇತನಕ್ಕೆ ₹ 80 ಲಕ್ಷ ಯೋಜನೆ  ಸಿದ್ಧವಾಗಿದೆ.  ಟೆಂಡರ್‌  ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ.
–ಮುರಳಿಗೌಡ, 14ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.