ADVERTISEMENT

ನಂಗಲಿ: ಪೋಲಾಗುತ್ತಿರುವ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 8:51 IST
Last Updated 10 ನವೆಂಬರ್ 2017, 8:51 IST

ನಂಗಲಿ: ಇಲ್ಲಿಗೆ ಸಮೀಪದ ಪದ್ಮಘಟ್ಟ, ಮಲ್ಲೆಕುಪ್ಪ, ಶ್ರೀರಂಗಪುರ ಹಾಗೂ ಬಾಚಮಾಕನಹಳ್ಳಿ ಕೆರೆಗಳ ತೂಬಿನಿಂದ ನೀರು ಪೋಲಾಗುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಗಳು ತುಂಬಿ ಕೋಡಿ ಹರಿದಿವೆ. ಒಂದೂವರೆ ದಶಕದ ನಂತರ ಈ ಭಾಗದ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೆರೆ ನೀರನ್ನು ಪೋಲಾಗದಂತೆ ತೂಬುಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆದರೆ ಈ ಆದೇಶವು ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಪದ್ಮಘಟ್ಟ ಕೆರೆಯ ನೀರು ಸೋರಿಕೆಯಾಗಿ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ತಗ್ಗು ಪ್ರದೇಶಗಳಿಗೆ ಹರಿದು ಹೋಗುತ್ತಿದೆ. ಉಳಿದ ಕೆರೆಗಳಿಂದ ಸೋರಿಕೆಯಾಗುವ ನೀರು ಸಮೀಪವಿದ ಗದ್ದೆಗಳಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ತೂಬುಗಳನ್ನು ಸರಿಯಾಗಿ ಮುಚ್ಚದಿರುವುದೆ ಇದಕ್ಕೆ ಕಾರಣ.

ಹಲವು ವರ್ಷಗಳಿಂದ ಕೆರೆಗಳು ಬತ್ತಿ ಅಂತರ್ಜಲ ಮಟ್ಟ ಕುಸಿದಿತ್ತು. ಇದರಿಂದ ಹನಿ ನೀರಿಗೂ ಹಾಹಾಕಾರವಿತ್ತು. ಜನರು ಗ್ರಾಮಗಳ ಹೊರವಲಯದ ಕೃಷಿ ಜಮೀನುಗಳಿಗೆ ನಡೆದು ಹೋಗಿ ಕುಡಿಯುವ ನೀರು ತರುವಂತಾಗಿತ್ತು. ಆದರೆ, ಈಗ ಕೆರೆಗಳು ತುಂಬಿದ್ದರೂ ನೀರು ಸಂರಕ್ಷಣೆ ಮಾಡುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ.

ADVERTISEMENT

‘ಕೆರೆ ನೀರನ್ನು ಕೃಷಿ ಚಟು ವಟಿಕೆಗಳಿಗೆ ಬಳಸಬಾರದೆಂದು ಜಿಲ್ಲಾ ಡಳಿತ ಸೂಚನೆ ನೀಡಿದ ಮೇಲೆ ರೈತರು ಬೆಳೆ ಬೆಳೆಯಲು ಮುಂದಾಗಿಲ್ಲ. ಆದರೆ, ತೂಬಿನ ಮೂಲಕವೇ ಕೆರೆಯ ನೀರು ಪೋಲಾಗುತ್ತಿದೆ’ ಎಂದು ಬಾಚಮಾಕನಹಳ್ಳಿ ರೈತ ವಿಜಿಯಪ್ಪ ’ಪ್ರಜಾವಾಣಿ’ಗೆ ತಿಳಿಸಿದರು.

ವ್ಯರ್ಥವಾಗಿ ಹರಿದು ಹೋಗುತ್ತಿದ್ದರೆ ಕೆರೆ ಸಂಪೂರ್ಣ ಖಾಲಿಯಾಗುತ್ತದೆ. ನೀರು ಸೋರಿಕೆಯಾಗುತ್ತಿರುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಆದರೆ, ಅಧಿಕಾರಿಗಳು ಸೌಜನ್ಯಕ್ಕೂ ಕೆರೆಯ ತೂಬು ಪರಿಶೀಲಿಸಿಲ್ಲ ಎಂದು ಮಲ್ಲೆಕುಪ್ಪ ಗ್ರಾಮದ ರೈತ ಅಂಬರೀಶ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.