ADVERTISEMENT

ನರೇಗಾ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಕಲ್ಪ ಮಾಡಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:46 IST
Last Updated 23 ಮೇ 2017, 4:46 IST

ಕೋಲಾರ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) 150 ದಿನ ಉದ್ಯೋಗ ನೀಡುವ ಅವಕಾಶವಿದೆ. ಹೀಗಾಗಿ ಯಾವುದೇ ಭಯ ಇಟ್ಟುಕೊಳ್ಳದೆ ಮತ್ತು ವದಂತಿಗಳಿಗೆ ಕಿವಿಗೊಡದೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ದೃಢ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಸಲಹೆ ನೀಡಿದರು.

ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ನರೇಗಾದಡಿ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ನರೇಗಾದಲ್ಲಿ ದಿನಕ್ಕೆ ₹ 236 ಕೂಲಿ ನಿಗದಿಪಡಿಸಲಾಗಿದ್ದು, ಕೆಲಸಕ್ಕೆ ಬರುವವರು ಉದ್ಯೋಗ ಚೀಟಿ ಪಡೆದುಕೊಂಡು ಹಾಜರಾಗಬೇಕು’ ಎಂದರು.

‘ಈಗಾಗಲೇ ಬಹುತೇಕ ಮಂದಿಗೆ ಉದ್ಯೋಗ ಚೀಟಿ ವಿತರಿಸಲಾಗಿದ್ದು, ಉಳಿದವರಿಗೆ ಶೀಘ್ರದಲ್ಲೇ ನೀಡಲಾಗುವುದು. ಕೂಲಿ ಹಣ ಬರುವುದಿಲ್ಲ ಎಂಬ ವದಂತಿ ಹಲವೆಡೆ ಹರಿದಾಡುತ್ತಿದೆ. ಇದಕ್ಕೆ ಕಿವಿಗೊಡಬೇಡಿ. ಹಾಜರಾತಿ ಪಡೆದು ಕೂಲಿ ಹಣ ಬಿಡುಗಡೆ ಮಾಡಲಾಗುವುದು. ಹೀಗಾಗಿ ನಿರ್ಭಯವಾಗಿ ಕೆಲಸ ನಿರ್ವಹಿಸಿ’ ಎಂದು ಸಲಹೆ ನೀಡಿದರು.

ADVERTISEMENT

ನೀರಿನ ವ್ಯವಸ್ಥೆ: ‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬಂದಿರುವ ಕಾರಣ ಅವರ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಕೆರೆಗಳಲ್ಲಿ ನೀರು ಉಳಿಸಿಕೊಂಡರೆ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಕೆರೆಯ ಹೂಳೆತ್ತುವ ಕಾರ್ಯವನ್ನು ಆಂದೋಲನದಂತೆ ಕೈಗೆತ್ತಿಕೊಂಡಿದ್ದು, ಮಾದರಿಯಾಗಿ ಕೆಲಸ ನಿರ್ವಹಿಸಿದಲ್ಲಿ ಸುತ್ತಮುತ್ತಲ 7-8 ಗ್ರಾಮಗಳಿಗೆ ನೀರಿನ ಸೌಕರ್ಯ ಒದಗಿಸಬಹುದು’ ಎಂದು ಹೇಳಿದರು.

‘ಜಿಲ್ಲಾ ಪಂಚಾಯಿತಿ ಅನುದಾನ ಕಡಿಮೆ ಇರುವುದರಿಂದ ಕೆರೆಯ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಅವಕಾಶವಿಲ್ಲ. ಕಾಲುವೆಗಳನ್ನು ನಿರ್ಮಿಸಲು ಜೆಸಿಬಿ ಬಳಸಬೇಕಾಗಿದೆ. ಆದರೆ, ನರೇಗಾದಲ್ಲಿ ಜೆಸಿಬಿ ಯಂತ್ರ ಬಳಕೆಗೆ ಅವಕಾಶವಿಲ್ಲ. ಕೆಲವೆಡೆ ಕೆರೆಯ ಜಾಗ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸಿ ನರೇಗಾ ಯೋಜನೆಯಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿ’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

‘ನರೇಗಾ ಸಂಬಂಧ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ. ಇದೇ ಮಾದರಿಯಲ್ಲಿ ಬೇರೆ ಕಡೆಗಳಲ್ಲೂ ಕೆಲಸ ಆರಂಭಿಸಿ ಕೆರೆ ಹಾಗೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಲಕರಣೆಗೆ ಬಾಡಿಗೆ: ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ಮಾತನಾಡಿ, ‘ನರೇಗಾ ಅಡಿ ಕೆಲಸ ಮಾಡುವವರಿಗೆ ₹ 236 ಕೂಲಿ ನೀಡುವುದರ ಜತೆಗೆ ಕೆಲಸಕ್ಕೆ ಬಳಸುವ ಸಲಕರಣೆಗಳಿಗೆ ದಿನಕ್ಕೆ ₹ 10 ಬಾಡಿಗೆ ನೀಡಲಾಗುತ್ತದೆ. ಬೇಸಿಗೆ ಕಾಲವಾಗಿರುವುದರಿಂದ ಬೆಳಿಗ್ಗೆ ಬೇಗನೆ ಬಂದು ಕೆಲಸ ಮಾಡಿದರೆ ಆಯಾಸ ಕಡಿಮೆ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಕೂಲಿ ಪಡೆದುಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋರಗಂಡಹಳ್ಳಿಯಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿರುವ ಕಲ್ಯಾಣಿಯನ್ನು ವೀಕ್ಷಿಸಿದ ಸಿಇಒ ಕಾವೇರಿ, ‘ಕಲ್ಯಾಣಿ ಪುನಶ್ಚೇತನ ಕಾಮಗಾರಿ ಮಾದರಿಯಾಗಿದೆ. ಸಾರ್ವಜನಿಕರು ಕಲ್ಯಾಣಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು’ ಎಂದರು. ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ, ಸದಸ್ಯ ಮನೋಜ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಪಾಲ್ಗೊಂಡಿದ್ದರು.

* * 

ಎನ್‌ಆರ್‌ಇಜಿ ಯೋಜನೆಯಲ್ಲಿ ಕೆಲಸ ಮಾಡುವುದರಿಂದ ಹಣ ಸಂಪಾದನೆಯಾಗುವುದರ ಜತೆಗೆ ಕೆರೆ, ಕುಂಟೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದು.
ಬಿ.ಬಿ.ಕಾವೇರಿ
ಜಿ.ಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.