ADVERTISEMENT

ಪರಿಸರ ಬಗ್ಗೆ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:08 IST
Last Updated 11 ಸೆಪ್ಟೆಂಬರ್ 2017, 9:08 IST

ಕೋಲಾರ: ‘ಪರಿಸರ ನಾಶದಿಂದ ಮನುಷ್ಯನ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕದ ವಿ.ಬಾಬು ತಿಳಿಸಿದರು.

ತಾಲ್ಲೂಕಿನ ಗುರಗಂಜಿಗುರ್ಕಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಶನಿವಾರ ಆರಂಭವಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಗ್ರಾಮಗಳನ್ನು ನೋಡಲು ಸುಂದರವಾಗಿಯೇ ಕಾಣುತ್ತವೆ. ಮಳೆ ಬಿದ್ದಾಗ ನೀರು ರಸ್ತೆಯಲ್ಲಿ ಹರಿಯುತ್ತದೆ. ಚರಂಡಿಗಳು ಸ್ವಚ್ಛತೆಯಿಂದ ಇರುವುದಿಲ್ಲ. ನೀರು ಸಂಗ್ರಹವಾಗುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಗಳ ಸ್ವಚ್ಛತೆಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ದೇವಾಲಯ, ಸ್ಮಶಾನ ಮತ್ತು ಗುಂಡುತೋಪುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದಾಗ ಮುಂದಿನ ದಿನಗಳಲ್ಲಿ ಸಾಕಷ್ಟು ಮಳೆ ಬಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಕೋರಿದರು.

ಎತ್ತರದ ಮರಳು ಇಲ್ಲದೆ ಇರುವ ಕಾರಣ ಬರಪರಿಸ್ಥಿತಿಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮನುಷ್ಯರನ ದುರಾಸೆಯಿಂದ ಮರಗಳು ನಾಶವಾಗಿವೆ. ಈ ಹಿಂದೆ ಎಲ್ಲಿನೋಡಿದರೂ ಮರಗಳು ಕಾಣುತ್ತಿದ್ದವು. ಆದರೆ ಈಗ ಕಟ್ಟಡಗಳು ಕಾಣುತ್ತಿವೆ. ಮರಗಳ ನಾಶದಿಂದ ಪ್ರಾಣಿ ಪಕ್ಷಿಗಳ ಸಂತತಿಯ ಮೇಲೂ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಮೊಬೈಲ್, ಇಂಟರ್ ನೆಟ್ ಸಂಸ್ಕೃತಿಗೆ ಮಾರುಹೋಗಿದ್ದು, ಸ್ವಚ್ಛತೆ ಹಾಗೂ ಪರಿಸರದ ಮೇಲಿನ ಕಾಳಜಿಯನ್ನು ಮರೆತು ಹೋಗಿದ್ದಾರೆ. ಈ ಕುರಿತು ಅವರಿಗೆ ಕಾರ್ಯಾಗಾರ ನಡೆಸಬೇಕಾದ ಕೆಲಸ ಆಗಬೇಕಿದೆ’ ಎಂದು ಸರ್ಕಾರಿ ಬಾಲಕರ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಕೋಮಲಾ ತಿಳಿಸಿದರು.

ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಹಂತದಿಂದಲ್ಲೂ ಪರಿಸರದ ಬಗ್ಗೆ ಪಠ್ಯದಲ್ಲಿ ಅಳವಡಿಸಲಾಗಿದೆ. ತರಗತಿಗೆ ಅಷ್ಟೇ ಇದನ್ನು ಸಿಮೀತ ಮಾಡಿಕೊಂಡಿದ್ದು ಉಳಿದ ಬಿಡುವಿನ ವೇಳೆಯಲ್ಲಿ ಮೊಬೈಲ್, ಇಂಟರ್‌ನೆಟ್ ಬಳಕೆಯಲ್ಲಿ ತೊಗಿಸಿಕೊಳ್ಳುತ್ತಿರುವುದು ವಿಷಾದಕರ ಸಂಗತಿ’ ಎಂದರು.

ಮೊಬೈಲ್ ಬಳಕೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಈ ಕುರಿತು ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ನಗರದ ಸಿ.ಬೈರೇಗೌಡ ನಗರದಲ್ಲಿ ಭಾನುವಾರ ಸಂಸ್ಥೆಯಿಂದ ಸ್ವಚ್ಛತಾ ಅಭಿಯಾನ ನಡೆಸಿ, ಸಸಿಗಳನ್ನು ನೆಟ್ಟರು. ಉಪನ್ಯಾಸಕ ರಾಮಕೃಷ್ಣಪ್ಪ, ಶಿಕ್ಷಕಿಯರಾದ ಸುವರ್ಣ, ಯಶೋದಮ್ಮ, ರೋವರ್ಸ್‌ಗಳಾದ ಶ್ರೀಧರ್, ಸುಬ್ರಮಣಿ, ಕಿಶೋರ್, ದಿಲೀಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.