ADVERTISEMENT

ಭರಾಟೆಯ ಕುರಿ,ಮೇಕೆ ವ್ಯಾಪಾರ

ಯುಗಾದಿ ವರ್ಷತೊಡುಕು; ಚಿಕ್ಕ ತಿರುಪತಿ ಶನಿವಾರದ ಸಂತೆಯಲ್ಲಿ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 7:01 IST
Last Updated 27 ಮಾರ್ಚ್ 2017, 7:01 IST
ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿಯಲ್ಲಿ ಶನಿವಾರ ನಡೆದ ವಾರದ ಸಂತೆಯಲ್ಲಿ ಈ ಬಾರಿ ತೀವ್ರವಾದ ಜನಜಂಗುಳಿ ಇತ್ತು. ಮಾ.29ರಂದು ಯುಗಾದಿಯ  ಹಬ್ಬದ ಕಾರಣ ವರ್ಷ ತೊಡುಕು ಆಚರಿಸಲು ಜನರು ಕುರಿ, ಮೇಕೆಗಳನ್ನು ಭರ್ಜರಿಯಾಗಿ  ಪೈಪೋಟಿಯಲ್ಲಿ ಖರೀದಿಸುತ್ತಿದ್ದರು.  
 
ಚಿಕ್ಕತಿರುಪತಿಯ ಪ್ರಸನ್ನ ವೆಂಕಟ ರಮಣ ಸ್ವಾಮಿ ದೇಗುಲದ ಆವರಣದಲ್ಲಿ ನಡೆಯುವ ಈ ಸಂತೆಯಲ್ಲಿ ಕುರಿ ಮರಿಗಳದ್ದೇ ಕಾರುಬಾರು ಆಗಿತ್ತು. ಮರಿಗಳನ್ನು ಮಾರಾಟ ಮಾಡಲು, ಖರೀದಿಸಲು ಸುತ್ತ–ಮುತ್ತಲ ಹಲವು ಹಳ್ಳಿಗಳ ಜನರು ಬಂದಿದ್ದರು.  ಬೆಂಗಳೂರು ಸೇರಿದಂತೆ  ತಮಿಳುನಾಡಿನ ಹೊಸೂರಿನಿಂದಲೂ ಜನರು ಬಂದಿದ್ದರು. 
 
ಒಂದು ಕುರಿ ಮರಿ ಕನಿಷ್ಠ ₹ 4ರಿಂದ 15 ಸಾವಿರದ ವರೆಗೆ ಮಾರಾಟ ನಡೆಯಿತು. ಮೇಕೆ ₹ 6 ಸಾವಿರದಿಂದ ಪ್ರಾರಂಭವಾಗಿ ತೋಕಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗುತ್ತದೆ. ಬೆಳಿಗ್ಗೆ 7ಕ್ಕೆ ಮಾರಾಟ ಆರಂಭವಾಗಿ ಮಧ್ಯಾಹ್ನದ ವೇಳೆಗೆ ಬಹುತೇಕ ಮುಗಿಯಿತು. ಕೋಳಿಗಳ ಖರೀದಿಯು  ಇದೇ ರೀತಿಯಲ್ಲಿ ನಡೆಯಿತು.
 
‘ಯುಗಾದಿ ಹಬ್ಬದ ಸಮೀಪದಲ್ಲಿಯೇ ಇರುವ ಕಾರಣ ಸಂತೆಯಲ್ಲಿ  ಮರಿಗಳ ಭರ್ಜರಿ ಮಾರಾಟ ನಡೆಯಿತು’ ಎನ್ನುತ್ತಾರೆ ಗ್ರಾಮದ ವಿಜಯ್ ಕುಮಾರ್. 
 
ಮಹಿಳೆಯರು ಭಾಗಿ: ಸಂತೆಯ ವಿಶೇಷ ವೆಂದರೆ ಮಹಿಳೆಯರುರೂ ವ್ಯಾಪಾರ ಮಾಡುವುದು. ವರ್ಷತೊಡುಕು ಪ್ರಯುಕ್ತ ಹಳ್ಳಿಗಳಿಂದ ಹಲವು ಮಹಿಳೆಯರು ಮರಿಗಳನ್ನು ಮತ್ತು ಕೋಳಿಗಳನ್ನು ತಂದು ಮಾರಾಟ ಮಾಡುತ್ತಿದ್ದರು.
 
ವೆಂಕಟರಮಣಸ್ವಾಮಿ ದೇವಾಲ ಯಕ್ಕೆ ಸೇರಿದ ಆವರಣದಲ್ಲಿ ನಡೆಯುವ ಈ ಸಂತೆಯನ್ನು ವರ್ಷಕ್ಕೆ ಒಮ್ಮೆ ಪಂಚಾಯಿತಿಯಿಂದ ಹರಾಜು ಮಾಡಲಾಗುತ್ತದೆ. ಪ್ರತಿ ವರ್ಷ ₹ 8 ರಿಂದ ₹ 10 ಲಕ್ಷಕ್ಕೆ ಗುತ್ತಿಗೆದಾರರು ಹರಾಜಿನಲ್ಲಿ ಪಡೆಯುತ್ತಾರೆ. ಇವರು ಸಂತೆಗೆ ಬರುವುದರಿಂದ  ₹ 20 ರಂತೆ ಸುಂಕ ವಸೂಲಿ ಮಾಡುತ್ತಾರೆ. 
 
ಬೆರಳು ವ್ಯಾಪಾರ
‘ಸರ್ಕಾರ ನಿಷೇಧಿಸಿರುವ ಬೆರಳು ವ್ಯಾಪಾರ ಇಂದಿಗೂ ಸಂತೆಯಲ್ಲಿ ನಡೆಯು ತ್ತಿದೆ. ಮಾರುವವರು, ಕೊಳ್ಳುವವರು ಕೈಗಳ ಮೇಲೆ ಬಟ್ದೆ ಹಾಕಿಕೊಂಡು ಬೆರಳುಗಳಲ್ಲೇ ಲೆಕ್ಕಾಚಾರ ಮಾಡುವರು. ಈ ಲೆಕ್ಕಾಚಾರ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಕಡಿಮೆಯಾಯಿತು, ಆಗೋದಿಲ್ಲ ಎಂಬ ಮಾತು ಮಾತ್ರ ಕೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.