ADVERTISEMENT

ಭೈರೇಗೌಡ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:24 IST
Last Updated 15 ಸೆಪ್ಟೆಂಬರ್ 2017, 9:24 IST
ಕೆ.ಶ್ರೀನಿವಾಸಗೌಡ
ಕೆ.ಶ್ರೀನಿವಾಸಗೌಡ   

ಕೋಲಾರ: ‘ಮಾಜಿ ಸಚಿವ ದಿವಂಗತ ಸಿ.ಬೈರೇಗೌಡ ಅವರು ಸದಾ ರೈತರ ಪರವಾಗಿದ್ದರು. ಶಾಸಕ ವರ್ತೂರು ಪ್ರಕಾಶ್‌ ತಮ್ಮ ತೆವಲಿಗೆ ರೈತರ ಜಮೀನು ವಿಚಾರದಲ್ಲಿ ಅಂತಹ ಮಹಾನ್ ವ್ಯಕ್ತಿ ವಿರುದ್ಧ ಮನಬಂದಂತೆ ಮಾತನಾಡುವುದು ಸರಿಯಲ್ಲ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮುತ್ಸದಿಗಳಾದ ಬೈರೇಗೌಡ, ವೆಂಕಟಗಿರಿಯಪ್ಪ ನಡೆದು ಬಂದ ದಾರಿ ಬೇರೆ. ಆದರೆ, ವರ್ತೂರು ಪ್ರಕಾಶ್‌ ನಡೆಯುತ್ತಿರುವ ದಾರಿಯೇ ಬೇರೆ. ಬೈರೇಗೌಡರು ಮತ್ತು ತಮ್ಮ ವಿರುದ್ಧ ಶಾಸಕರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ವರ್ತೂರು ಪ್ರಕಾಶ್‌ಗೆ ಬೈರೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬೈರೇಗೌಡರು ತಾಲ್ಲೂಕಿನ ಅಪ್ಪಸಂದ್ರ ಹಾಗೂ ಅಚ್ಚಟ್ನಹಳ್ಳಿ ರೈತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿಸಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ. ಆದರೆ, ಬೈರೇಗೌಡರು ದೇವರಾಜ ಅರಸು ಕಾಲದಲ್ಲಿ ಉಳುವವನೇ ಭೂಮಿ ಒಡೆಯ ಕಾಯಿದೆ ಕುರಿತು ಕೋಲಾರದ ಬೀದಿ ಬೀದಿಯಲ್ಲಿ ಓಡಾಡಿ ಪ್ರಚಾರ ಮಾಡಿದ್ದು ಶಾಸಕರಿಗೆ ಗೊತ್ತಿಲ್ಲ ಎಂದರು.

ADVERTISEMENT

ಭೂಸ್ವಾಧೀನಕ್ಕೆ ಗುರುತಿಸಲಾಗಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಗಿಡಗಳನ್ನು ಹಾಕಿದ್ದಾರೆ. ಗೋಮಾಳದ ಜಮೀನು ಎಂದು ನ್ಯಾಯಾಲಯ ಆದೇಶ ನೀಡಿದೆ. ಜಮೀನಿನ ವಿಷಯವಾಗಿ ಸಮಸ್ಯೆ ಇದ್ದರೆ ರೈತರು ಸಚಿವರನ್ನು ಅಥವಾ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬಹುದು. ಆದರೆ, ಶಾಸಕರು ರಾಜಕೀಯ ಲಾಭಕ್ಕೆ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ವ್ಯಕ್ತಿತ್ವ ಮುಖ್ಯ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ತನಗೆ 50 ಸಾವಿರ ಮತ ಬಂದಿದ್ದವು. ಜನರಿಗೆ ಆ ಪಕ್ಷ ಈ ಪಕ್ಷ ಮುಖ್ಯವಲ್ಲ, ವ್ಯಕ್ತಿತ್ವ ಮುಖ್ಯ. ಹಾಗಾಗಿಯೇ ತಾನು ಹಿಂದಿನ 4 ಚುನಾವಣೆಗಳಲ್ಲಿ ಮೂರು ಪಕ್ಷಗಳಿಂದ ಸ್ಪರ್ಧೆ ಮಾಡಿದ್ದೆ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಯಾವುದೇ ಗೊಂದಲವಿಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಕುಮಾರಸ್ವಾಮಿ ತನಗೆ ಸೂಚಿಸಿದ್ದಾರೆ. ಸಿ.ಆರ್.ಮನೋಹರ್ ಅವರನ್ನು ವಿಧಾನ ಪರಿಷತ್‌ ಸದಸ್ಯರಾಗಿ ಮಾಡಲು ಮುಂದೆ ನಿಂತು ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಆಸೆ ಇದ್ದೇ ಇರುತ್ತದೆ. ಹಣವಂತರಿಗೆ ಆಸೆ ಸ್ವಲ್ಪ ಜಾಸ್ತಿಯೇ ಇರುತ್ತದೆ. ವರಿಷ್ಠರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಪರಿಸ್ಥಿತಿ ಎದುರಾದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷದಲ್ಲಿ ಇರುವುದು ಅಥವಾ ಬಿಡುವುದು ಮುಖ್ಯವಲ್ಲ. ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಲು ಸಿದ್ಧ. ಇಫ್ಕೊ ಟೋಕಿಯೊ ಸಂಸ್ಥೆಯ ಅಧ್ಯಕ್ಷನಾಗಿರುವ ಕಾರಣ ನೂರೆಂಟು ಜವಾಬ್ದಾರಿಗಳಿವೆ ಎಂದು ಅವರು ಹೇಳಿದರು.
‌ ಹೀಗಾಗಿ ತಿಂಗಳಿಗೆ ಎರಡು ಬಾರಿ ದೆಹಲಿಗೆ ಹೋಗಬೇಕಾಗುತ್ತದೆ. ಹಾಗಂತ ಕ್ಷೇತ್ರ ಮರೆತಿಲ್ಲ. ಒಂದು ಅಥವಾ ಎರಡು ದಿನದಲ್ಲಿ ಇಲ್ಲಿ ಕಡಿದು ಕಟ್ಟೆ ಹಾಕುವುದು ಏನೂ ಇರುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.