ADVERTISEMENT

ಮರಿ ಮೇವಾಗಿ ಮಳೆ ಮರದ ಕಾಯಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:31 IST
Last Updated 15 ಮಾರ್ಚ್ 2017, 7:31 IST

ಶ್ರೀನಿವಾಸಪುರ: ತಾಲ್ಲೂಕಿನ ರಸ್ತೆ ಬದಿಗಳಲ್ಲಿ ಬೆಳೆದಿರುವ ಮಳೆ ಮರಗಳ ಕೆಳಗೆ ಉದುರಿರುವ ಕಾಯಿ ಕುರಿ ಹಾಗೂ ಮೇಕೆಗಳಿಗೆ ಮೇವಾಗಿ ಬಳಕೆಯಾಗುತ್ತಿದೆ. ಬರದಿಂದ ಬೇಸತ್ತಿರುವ ರೈತರು ಮಳೆ ಮರದ ಕಾಯಿಯನ್ನು ಆರಿಸಿ ಕೊಡೊಯ್ದು ಕುರಿ ಹಾಗೂ ಮೇಕೆಗಳ ಹಸಿವು ನೀಗುತ್ತಿದ್ದಾರೆ.

ತಾಲ್ಲೂಕಿನ ರಸ್ತೆ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮಳೆ ಮರಗಳನ್ನು ಬೆಳೆಸಿದೆ. ಶಾಲೆ ಹಾಗೂ ಸರ್ಕಾರಿ ಕಚೇರಿಗಳ ಆವರಣಗಳಲ್ಲೂ ಮಳೆ ಮರಗಳಿವೆ. ಬೇಸಿಗೆ ಆರಂಭದೊಂದಿಗೆ ಮರಗಳಲ್ಲಿ ಎಲೆ ಉದುರಿದೆ. ದಟ್ಟವಾಗಿ ಬಿಟ್ಟಿರುವ ಕಾಯಿ ಕಾಣಿಸುತ್ತಿದೆ. ಅದು ಹಣ್ಣಾಗಿ ಉದುರುತ್ತಿದೆ.

ಮಳೆ ಮರ ಕಾಣಿಸಿದರೆ ಸಾಕು ಬಯಲಿನ ಮೇಲೆ ಮೇಯಲು ಬಿಟ್ಟಿರುವ ಕುರಿ ಹಾಗೂ ಮೇಕೆಗಳು ಓಡಿ ಹೋಗಿ ಮರದ ಕೆಳಗೆ ನಿಲ್ಲುತ್ತವೆ. ಉದುರಿದ ಕಾಯಿಯನ್ನು ಹೊಟ್ಟೆ ಬಿರಿಯುವಂತೆ ತಿನ್ನುತ್ತವೆ. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿಯುಳ್ಳ ಹಾಗೂ ಸುವಾಸನಾಯುಕ್ತವಾದ ಕಾಯಿಯೆಂದರೆ ಅವುಗಳಿಗೆ ಪಂಚಪ್ರಾಣ. ತಿನ್ನಲು ಮೃದುವಾಗಿರುವುದರಿಮದ ಹೆಚ್ಚು ಇಷ್ಟಪಡುತ್ತವೆ.

ADVERTISEMENT

ಬರದ ನಡುವೆ ಉರಿಬಿಸಿಲು ಪ್ರಾರಂಭವಾಗಿದೆ. ದನಕರುಗಳಿಗೆ ಬಯಲಿನ ಮೇಲೆ ಮೇವು ಸಿಗುತ್ತಿಲ್ಲ. ಕುರಿ ಮೇಕೆಗಳಿಗೂ ಮೇವಿನ ಕೊರತೆ ಕಾಣಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ಮಳೆ ಮರದ ಕಾಯಿ ಹಸಿವು ನೀಗಲು ಸಹಕಾರಿಯಾಗಿದೆ ಎಂದು ಅಂಕತಟ್ಟಿ ಗ್ರಾಮದ ರೈತ ಬಿ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ನಾಟಿ ಹಸು ಹಾಗೂ ಎಮ್ಮೆಗಳು ಮಾತ್ರವಲ್ಲದೆ, ಕುರಿ ಹಾಗೂ ಮೇಕೆಗಳು ದೊಡ್ಡ ಸಂಖ್ಯೆಯಲ್ಲಿವೆ. ಬೇರೆ ಬೇರೆ ಕಾರಣಗಳಿಂದ ಕೃಷಿ ಹಾಗೂ ತೋಟಗಾರಿಕೆ ಕೈಕೊಟ್ಟಮೇಲೆ, ಹೆಚ್ಚಿನ ಸಂಖ್ಯೆಯ ರೈತರು ಕುರಿ ಸಾಕಾಣಿಕೆ ಮಾಡತೊಡಗಿದ್ದಾರೆ. ಬಯಲಿನ ಮೇಲೆ ಸಿಗುವ ಹುಲ್ಲನ್ನು ನಂಬಿ ಕುರಿ ಸಾಕಾಣಿಕೆ ನಡೆಯುತ್ತಿದೆ. ಆದರೆ ಈಗ ಬಯಲಿನ ಹುಲ್ಲಿಗೂ ಸಂಚಕಾರ ಬಂದಿದೆ. ಹಾಗಾಗಿ ಮರದ ಮೇವು ಬರದ ಮೇವಾಗಿ ಪರಿಣಮಿಸಿದೆ.

ಬರದಲ್ಲಿ ಅನ್ಯ ಮಾರ್ಗ ಕಾಣದೆ ಸಿಕ್ಕಿದ ಕಾಯಿ, ಸೊಪ್ಪುಗಳನ್ನು ಕುರಿ ಮೇಕೆಗಳಿಗೆ ಉಣಿಸುವುದುಂಟು. ಸ್ವಲ್ಪ ಎಚ್ಚರ ತಪ್ಪಿದರೆ ಕುರಿ ಮಂದೆ ಸತ್ತುಹೋಗುವ ಅಪಾಯ ಇಲ್ಲದಿಲ್ಲ. ಜಾಲಿ ಮರದ ಹಸಿ ಕಾಯಿ ತಿಂದು ಕುರಿ ಹಾಗೂ ಮೇಕೆಗಳು ಸತ್ತುಹೋದ ಹಲವು ನಿದರ್ಶನಗಳಿವೆ. ಆದರೆ ಮಳೆ ಮರದ ಕಾಯಿ ಸೇವನೆಯಿಂದ ಅಂಥ ಅಪಾಯವಿಲ್ಲ ಎಂಬುದು ಕುರಿಕಾರ ಮುನಿಯಪ್ಪ ಅವರ ಅಭಿಪ್ರಾಯ.

ಸಾಮಾನ್ಯವಾಗಿ ಬಯಲಿನ ಮೇಲೆ ಬೆಳೆಯವ ಹಸಿರು ಮೇವು ಬರಗಾಲದಲ್ಲಿ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ರೈತರು ಜಾನುವಾರು ಮೇವಿನ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಹಸಿ ಜಾಲಿ ಕಾಯಿ ವಿಷಯುಕ್ತವಾಗದ್ದು, ಕುರಿ ಹಾಗೂ ಮೇಕೆಗಳಿಗೆ ಹಾಕಬಾರದು ಎಂದು ಪಶುವೈದ್ಯಾಧಿಕಾರಿ ಡಾ. ಆರ್‌.ನಾಗಭೂಷಣರೆಡ್ಡಿ ಸಲಹೆ ಮಾಡಿದ್ದಾರೆ.

ಇಷ್ಟೆಲ್ಲದರ ನಡುವೆ ಮಳೆ ಮರದ ಕಾಯಿ ಮಾತ್ರ ಬರಗಾಲದಲ್ಲಿ ಕುರಿ ಹಾಗೂ ಮೇಕೆಗಳ ಪಾಲಿಗೆ ಪಂಚಾಮೃತವಾಗಿ ಪರಿಣಮಿಸಿದೆ.
–ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.